ಲೇಖನ :- ನವರಾತ್ರಿ ಜೀವನ‌ಕೆ ಪಾಠ ಶಾಂತಿಯ ತೋಟ (ಭಾಗ - ೩)


ಲೇಖನ :- ನವರಾತ್ರಿ ಜೀವನ‌ಕೆ ಪಾಠ ಶಾಂತಿಯ ತೋಟ

ಭಾಗ - ೩

ನವರಾತ್ರಿಯ ಈ ಹತ್ತು ದಿನಗಳು ಜೀವನ ನೀತಿ ರೀತಿಗೆ ಇದೊಂದು ಪಾಠ ಇದ್ದಂತೆ.
ನಮ್ಮ ಸನಾತನ ಧರ್ಮದಲ್ಲಿ ಬರುವ ಪ್ರತಿ ಹಬ್ಬವು ಒಂದೊಂದು ಪಾಠ ಕಲಿಸುತ್ತದೆ.
ಅದಕ್ಕಂತೆಯೇ   ನಮ್ಮ ಭಾರತ ದೇಶ ಪೂಜ್ಯನಿಯವಾಗಿದೆ.

ಪ್ರದೇಶಾನುಸಾರ ಆಚರಣೆಗಳಲ್ಲಿ ವ್ಯತ್ಯಾಸವಿದೆ:
ಕರ್ನಾಟಕದಲ್ಲಿ ಮೈಸೂರು ದಸರಾ, ಗೊಂಬೆ ಹಬ್ಬ ಮತ್ತು ಆಯುಧಪೂಜೆ ಪ್ರಸಿದ್ಧ.
ಗುಜರಾತಿನಲ್ಲಿ ಗರ್ಭಾ ಮತ್ತು ಡಾಂಡಿಯಾ ನೃತ್ಯಗಳು ನಡೆಯುತ್ತವೆ.
ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ವಿಶೇಷ ಮಹತ್ವ ಪಡೆದಿದೆ.
ತಮಿಳುನಾಡಿನಲ್ಲಿ ಗೊಲು ಬೊಂಬೆಗಳ ಪ್ರದರ್ಶನದ ಸಂಪ್ರದಾಯವಿದೆ.
ಕೇರಳದಲ್ಲಿ ಸರಸ್ವತಿ ಪೂಜೆ ಮತ್ತು ವಿದ್ಯಾರಂಭ ಆಚರಣೆ ನಡೆಯುತ್ತದೆ.
ಕರ್ನಾಟಕದ ನವರಾತ್ರಿ
ಕರ್ನಾಟಕದಲ್ಲಿ ನವರಾತ್ರಿಯು ಮೈಸೂರು ದಸರಾಯೊಂದಿಗೆ ವಿಶೇಷವಾಗಿ ಪ್ರಸಿದ್ಧವಾಗಿದೆ. ಚಾಮುಂಡೇಶ್ವರಿ ದೇವಿಯ ಆರಾಧನೆ, ಅರಮನೆಯ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಜಯದಶಮಿಯ ಜಂಬೂಸವಾರಿ ಈ ಹಬ್ಬದ ಪ್ರಮುಖ ಆಕರ್ಷಣೆಗಳು.
ಮನೆಯಲ್ಲಿ ನಡೆಯುವ ಗೊಂಬೆ ಹಬ್ಬವು ಮಕ್ಕಳಿಗೆ ಪುರಾಣಕಥೆಗಳು, ದೇವತೆಗಳ ರೂಪಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಸುಂದರ ಸಂಪ್ರದಾಯವಾಗಿದೆ.

ನವರಾತ್ರಿಯ ಸಂಕೇತವೆಂದರೆ ಕೆಟ್ಟ ದಿನ ಆದ ಮೇಲೆ ಒಳ್ಳೆಯದಿನ, ಅಧರ್ಮದ ಮೇಲೆ ಧರ್ಮದ ಪತಾಕೆ ಹಾರುತ್ತದೆ.ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತವಾಗಿದೆ.

೧)ಶೈಲಪುತ್ರಿ — ಸ್ಥೈರ್ಯ ಮತ್ತು ಶಕ್ತಿ
೨)ಬ್ರಹ್ಮಚಾರಿಣಿ — ತಪಸ್ಸು ಮತ್ತು ನಿಷ್ಠೆ
೩)ಚಂದ್ರಘಂಟಾ — ಧೈರ್ಯ ಮತ್ತು ಶಾಂತಿ
೪)ಕೂಷ್ಮಾಂಡಾ — ಸೃಷ್ಟಿಶಕ್ತಿ
೫)ಸ್ಕಂದಮಾತಾ — ಮಾತೃತ್ವ ಮತ್ತು ಕರುಣೆ
೬)ಕಾತ್ಯಾಯನಿ — ಸಾಹಸ ಮತ್ತು ನ್ಯಾಯ
೭)ಕಾಲರಾತ್ರಿ — ಭಯನಾಶಿನಿ ಶಕ್ತಿ
೮)ಮಹಾಗೌರಿ — ಪಾವಿತ್ರ್ಯ ಮತ್ತು ಶಾಂತಿ
೯)ಸಿದ್ಧಿದಾತ್ರಿ — ಜ್ಞಾನ ಮತ್ತು ಸಿದ್ಧಿ
ಈ ರೂಪಗಳು ಮನುಷ್ಯನೊಳಗಿನ ವಿವಿಧ ಸದ್ಗುಣಗಳ ಸಂಕೇತಗಳಾಗಿವೆ.

ನಮ್ಮ ಭಾರತೀಯ ಪರಂಪರೆಯಲ್ಲಿ ದೇವಿಯ ಆರಾಧನೆಗೆ ಅತ್ಯಂತ ಮಹತ್ವದ ಸ್ಥಾನವಿದೆ.
ಋಗ್ವೇದದ ದೇವೀ ಸೂಕ್ತವು ವಾಕ್‌ಶಕ್ತಿಯ ಮಹಿಮೆಯನ್ನು ಸಾರುತ್ತದೆ. ದುರ್ಗಾ ಸೂಕ್ತವು ಸಂಕಟಗಳಿಂದ ಪಾರುಮಾಡುವ ದೈವಿಕ ಸಹಾಯವನ್ನು ಪ್ರಾರ್ಥಿಸುತ್ತದೆ. ಕೇನೋಪನಿಷತ್ತಿನ ಉಮಾ ಹೈಮವತೀ ಪ್ರಸಂಗವು ಬ್ರಹ್ಮಜ್ಞಾನದ ಮಹತ್ವವನ್ನು ತಿಳಿಸುತ್ತದೆ. ಮಾರ್ಕಂಡೇಯ ಪುರಾಣದ ದೇವೀಮಾಹಾತ್ಮ್ಯವು ಮಹಿಷಾಸುರನ ಸಂಹಾರ ಮತ್ತು ದೇವಿಯ ಮಹಿಮೆಯನ್ನು ವಿವರಿಸುತ್ತದೆ. ದೇವೀಭಾಗವತವು ದೇವಿಯ ಆರಾಧನೆ ಮತ್ತು ಭಕ್ತಿಯ ಮಹತ್ವವನ್ನು ತಿಳಿಸುತ್ತದೆ.

ಇನ್ನು ದೇವಿಯ ಮೂರನೇ ದಿನವಾದ
ಚಂದ್ರಘಂಟಾ ದೇವಿ ಬಗ್ಗೆ ತಿಳಿಯೋಣ....
ಮೂರನೆಯ ದಿನ ಚಂದ್ರಘಂಟಾ ದೇವಿ. ಧೈರ್ಯ ಮತ್ತು ದುಷ್ಟಶಕ್ತಿಗಳ ವಿರುದ್ಧ ಹೋರಾಟ ನಡೆಸಿ ವಿಜಯಗೈದ ದಿನ ಇವಳ  ವಾಹನ ಹುಲಿ ಅಥವಾ ಸಿಂಹ ಎಂದು ವಿವಿಧ ಚಿತ್ರಣಗಳಲ್ಲಿ ಕಾಣಬಹುದು.
ವಿಶೇಷತೆ: ಹಣೆಯ ಮೇಲಿರುವ ಗಂಟೆಯ ಆಕಾರದ ಅರ್ಧಚಂದ್ರ.

ಇನ್ನು ಪೌರಾಣಿಕ ಕಥೆ ಹಿನ್ನಲೆ ತಿಳಿಯಬೇಕಾದರೆ
ಪಾರ್ವತಿದೇವಿಯು ಶಿವನನ್ನು ವಿವಾಹವಾದ ನಂತರ ಚಂದ್ರಘಂಟಾ ರೂಪವನ್ನು ಧರಿಸಿದಳು ಎಂದು ನವದುರ್ಗಾ ಸಂಪ್ರದಾಯದಲ್ಲಿ ಹೇಳಲಾಗುತ್ತದೆ.
ಈ ರೂಪದಲ್ಲಿ ದೇವಿಯು ಅನೇಕ ಆಯುಧಗಳನ್ನು ಧರಿಸಿ ಯುದ್ಧಕ್ಕೆ ಸಿದ್ಧಳಾಗಿರುತ್ತಾಳೆ.
ಅಸುರರ ಉಪಟಳದಿಂದ ದೇವತೆಗಳು ಸಂಕಷ್ಟಕ್ಕೀಡಾದಾಗ, ದೇವಿಯು ಅವರ ರಕ್ಷಣೆಗೆ ನಿಂತು ದುಷ್ಟಶಕ್ತಿಗಳ ವಿರುದ್ಧ ಹೋರಾಡಿದಳು ಎಂಬುದು ಈ ರೂಪಕ್ಕೆ ಸಂಬಂಧಿಸಿದ ಪೌರಾಣಿಕ ನಂಬಿಕೆ.
ಅವಳ ಗಂಟೆಯ ನಾದವು ದುಷ್ಟಶಕ್ತಿಗಳನ್ನು ನಡುಗಿಸುತ್ತದೆ. ಆದರೆ ಅವಳ ಉಗ್ರರೂಪದ ಹಿಂದೆ ಭಕ್ತರ ಮೇಲಿನ ಅಪಾರ ಕರುಣೆಯೂ ಅಡಗಿದೆ.
ಇಲ್ಲಿ ನಾವುಗಳು ತಿಳಿಯಬೇಕಾದ್ದೇನೆಂದರೆ
ಧೈರ್ಯ ಎಂದರೆ ಇತರರನ್ನು ಹೆದರಿಸುವುದಲ್ಲ. ಅನ್ಯಾಯವನ್ನು ಎದುರಿಸುವುದು ಮತ್ತು ದುರ್ಬಲರನ್ನು ರಕ್ಷಿಸುವುದೇ ನಿಜವಾದ ಧೈರ್ಯ.
ಶಾಂತ ಸ್ವಭಾವದ ಜೊತೆಗೆ ಅನ್ಯಾಯದ ವಿರುದ್ಧ ನಿಲ್ಲುವ ಶಕ್ತಿಯೂ ಇರಬೇಕು. ನಮ್ಮಲ್ಲಿ ಬೆಳೆಸಿಕೊಳ್ಳಬೇಕಾದ ಗುಣ: ಧೈರ್ಯ, ಜಾಗರೂಕತೆ ಮತ್ತು ನ್ಯಾಯಪ್ರಜ್ಞೆ.

ಇನ್ನು ಮೂರನೇ ದಿನವಾದ ಶ್ರೀನಿವಾಸ ಕಲ್ಯಾಣ ಮಾಹಾತ್ಮೆಯ ಬಗ್ಗೆ ತಿಳಿಯೋಣ....

ಶ್ರೀನಿವಾಸನು ತಿರುಮಲ ಬೆಟ್ಟಕ್ಕೆ ಬಂದಾಗ, ಅಲ್ಲಿ ಮೊದಲೇ ನೆಲೆಸಿದ್ದವರು ಶ್ರೀ ವರಾಹಸ್ವಾಮಿ. ವರಾಹಸ್ವಾಮಿ ವಿಷ್ಣುವಿನ ವರಾಹ ಅವತಾರವಾಗಿದ್ದು, ಭೂದೇವಿಯನ್ನು ರಕ್ಷಿಸಿದ ನಂತರ ವೇಂಕಟಾಚಲ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಶ್ರೀನಿವಾಸನು ಬೆಟ್ಟಕ್ಕೆ ಬಂದು ತನ್ನ ವಾಸಕ್ಕಾಗಿ ಸ್ಥಳವನ್ನು ಹುಡುಕುತ್ತಿದ್ದಾಗ, ಅವನಿಗೆ ವರಾಹ ದೇವರ ದರ್ಶನವಾಯಿತು. ಶ್ರೀನಿವಾಸನು ವರಾಹಸ್ವಾಮಿಗೆ ನಮಸ್ಕರಿಸಿ ತನ್ನ ಭೂಲೋಕದ ಅವತಾರದ ಕಾರಣವನ್ನೂ, ಅಲ್ಲಿಗೆ ಬಂದಿರುವ ವೃತ್ತಾಂತವನ್ನೂ ವಿವರಿಸಿದನು. ಇಬ್ಬರೂ ಪರಸ್ಪರ ಪ್ರೀತಿಯಿಂದ ಮಾತನಾಡಿಕೊಂಡರು.ಶ್ರೀನಿವಾಸನ ವಿನಂತಿ
ಶ್ರೀನಿವಾಸನು ವರಾಹ ದೇವರಿಗೆ ಹೀಗೆ ವಿನಂತಿಸಿಕೊಂಡನು
“ಸ್ವಾಮಿ, ನಾನು ಭಕ್ತರ ಅನುಗ್ರಹಕ್ಕಾಗಿ ಈ ವೇಂಕಟಾಚಲದಲ್ಲಿ ನೆಲೆಸಲು ಬಯಸುತ್ತೇನೆ. ದಯವಿಟ್ಟು ನನಗೆ ಇಲ್ಲಿ ವಾಸಿಸಲು ಸ್ಥಳವನ್ನು ಅನುಮತಿಸಬೇಕು.”
ವರಾಹಸ್ವಾಮಿ ಶ್ರೀನಿವಾಸನ ವಿನಂತಿ ಅಂಗೀಕರಿಸಿ, ಬೆಟ್ಟದಲ್ಲಿ ನೆಲೆಸಲು ಸ್ಥಳವನ್ನು ನೀಡಿದರು.
ಶ್ರೀನಿವಾಸನ ವಚನ
ಸ್ಥಳವನ್ನು ನೀಡಿದ ವರಾಹಸ್ವಾಮಿಗೆ ಶ್ರೀನಿವಾಸನು ಒಂದು ಮಹತ್ವದ ವಚನ ನೀಡಿದನು:
ತಿರುಮಲಕ್ಕೆ ಬರುವ ಭಕ್ತರು ಮೊದಲು ವರಾಹಸ್ವಾಮಿಯ ದರ್ಶನ ಮಾಡಬೇಕು.
ಮೊದಲು ವರಾಹಸ್ವಾಮಿಗೆ ಪೂಜೆ ಮತ್ತು ನೈವೇದ್ಯ ಸಲ್ಲಬೇಕು. ನಂತರವೇ ಶ್ರೀನಿವಾಸನ ದರ್ಶನ ಮಾಡಬೇಕು. ವರಾಹಸ್ವಾಮಿಗೆ ಸಲ್ಲಿಸಿದ ಗೌರವ ಮತ್ತು ಪೂಜೆಯ ನಂತರ ಶ್ರೀನಿವಾಸನ ಪೂಜೆ ನಡೆಯಬೇಕು. ಈ ಪರಂಪರೆಯನ್ನು ವರಾಹಸ್ವಾಮಿಯ ಆದ್ಯ ಪೂಜೆ ಎಂದು ಕರೆಯುತ್ತಾರೆ. ಶ್ರೀನಿವಾಸನು ತಾನು ವಾಸಿಸುವ ಸ್ಥಳವನ್ನು ವರಾಹಸ್ವಾಮಿಯಿಂದ ಪಡೆದ ಕಾರಣ, ಅವರಿಗೆ ಮೊದಲ ಪೂಜೆ ಸಲ್ಲಿಸುವ ಪದ್ಧತಿ ಉಂಟಾಯಿತು.
ವರಹಾ ಸ್ವಾಮಿಯು ಶ್ರೀನಿವಾಸನ ಸೇವೆಗೆ ಬಕುಳಾ
ಮಾತೆಯನ್ನು ಕಳಿಸುತ್ತಾನೆ.
ಬಕುಳಾಮಾತೆಯ ಹಿಂದಿನ ಜನ್ಮದಲ್ಲಿ ಶ್ರೀಕೃಷ್ಣನನ್ನು ಮಗುವಾಗಿ ಸಾಕಬೇಕೆಂಬ ಆಸೆ ಹೊಂದಿದ್ದ ಯಶೋದೆಯಾಗಿದ್ದಳು.ಶ್ರೀಕೃಷ್ಣನ ವಿವಾಹವನ್ನು ಕಣ್ಣಾರೆ ನೋಡುವ ಅವಕಾಶ ಯಶೋದೆಗೆ ದೊರೆಯಲಿಲ್ಲ ಎಂಬ ಕಾರಣಕ್ಕಾಗಿ ಈ ಕಲಿಯುಗದಲ್ಲಿ ಬಕುಳಾಮಾತೆಯಾಗಿ ಶ್ರೀನಿವಾಸನ ಕಲ್ಯಾಣವನ್ನು ನೆರವೇರಿಸುವ ಭಾಗ್ಯ ಇವಳದಾಗುತ್ತದೆ.
ಬಕುಳಾಮಾತೆಯು ಶ್ರೀನಿವಾಸನನ್ನು ತನ್ನ ಮಗನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಅವನಿಗೆ ಬೇಕಾದ ಸೇವೆಗಳನ್ನು ಮಾಡುತ್ತಿದ್ದಳು.
ಶ್ರೀನಿವಾಸನು ಪರಮಾತ್ಮನಾಗಿದ್ದರೂ, ಬಕುಳಾಮಾತೆಯ ಪ್ರೀತಿಯನ್ನು ಸ್ವೀಕರಿಸಿ ತಾಯಿಯ ವಾತ್ಸಲ್ಯಕ್ಕೆ ಗೌರವ ನೀಡಿದನು.

ಇದರಿಂದ ತಿಳಿಯುವುದೆಂದರೆ ದೇವರನ್ನು ಪ್ರೀತಿಸುವುದೆಂದರೆ ಕೇವಲ ಪೂಜೆ ಮಾಡುವುದು ಮಾತ್ರವಲ್ಲ. ಪ್ರೀತಿಯಿಂದ ಸೇವೆ ಮಾಡುವುದು, ಹಿರಿಯರನ್ನು ಗೌರವಿಸುವುದು ಮತ್ತು ಪ್ರತಿಫಲವನ್ನು ಬಯಸದೆ ಕರ್ತವ್ಯ ನಿರ್ವಹಿಸುವುದೂ ಭಕ್ತಿಯೇ ಆಗಿದೆ.

ಶ್ರೀನಿವಾಸ ಗೋವಿಂದ, ಶ್ರೀ ವೆಂಕಟೇಶ ಗೋವಿಂದ,
ಭಕ್ತವತ್ಸಲ ಗೋವಿಂದ, ಭಾಗವತಪ್ರಿಯ ಗೋವಿಂದ/

ಮುಂದುವರಿಯುವುದು............

✍️ ಪ್ರಿಯಾ ಪ್ರಾಣೇಶ ಹರಿದಾಸ
( ಆಧ್ಯಾತ್ಮ ಚಿಂತಕಿ, ಸಾಹಿತಿ)

Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ

ಲೇಖನ :- ಬಂತು ಸಂಕ್ರಾಂತಿ ತಂತು ಉಲ್ಲಾಸದ ಕಾಂತಿ