ಲೇಖನ :- ಬಂತು ಸಂಕ್ರಾಂತಿ ತಂತು ಉಲ್ಲಾಸದ ಕಾಂತಿ
ಲೇಖನ :-ಸಂಕ್ರಾಂತಿ ಬಂತು ನವ ಉಲ್ಲಾಸ ತಂತು
ಸ್ನೇಹಿತರೇ , ಬಹಳ ಧೀರ್ಘವಾದ ಉಪಯುಕ್ತವಾದ ಬರಹ ! ನಿಧಾನವಾಗಿ ಓದಿ ಅರ್ಥಮಾಡಿಕೊಂಡು ಹಬ್ಬವನ್ನಾಚರಿಸಿ ! ಅದಕ್ಕೇ ಮೊದಲೇ ಬರೆದಿದ್ದೇನೆ !!! ನಾಳೆ ಶನಿವಾರ "ಭೋಗಿಹಬ್ಬ" ! ಧನುರ್ಮಾಸದ ಕೊನೆಯದಿನ , ಮತ್ತೆ ಭಾನುವಾರ ಮಕರಸಂಕ್ರಾಂತಿ ಹಬ್ಬ .
ಮಕರಸಂಕ್ರಾಂತಿ ಹೊಸ ವರ್ಷದ ಮೊದಲ ವಿಶೇಷವಾದ ಹಬ್ಬ !!!!
ಮೊದಲು ಭೋಗಿಹಬ್ಬದ ಬಗ್ಗೆ ತಿಳಿಯೋಣ ---
ಭೋಗಿಹಬ್ಬದಂದು ದಾನ ಕೊಟ್ಟರೆ ಜೀವನದಲ್ಲಿ ಸದಾ
ಸುಖದ ಅನುಭೋಗ ದೊರಕುವುದೆಂದೇ ಪ್ರತೀತಿ ಇದೆ ! ಸಾಮಾನ್ಯವಾಗಿ ಇಂದು ದಾನಕ್ಕೆ ಪ್ರಾಮುಖ್ಯತೆ ! ಧನುರ್ಮಾಸದಲ್ಲಿ ತಿಂಗಳು ಪೂರಾ ಪ್ರಾತಃಕಾಲದಲ್ಲೆದ್ದು ಶುದ್ಧರಾಗಿ ದೇವರಪೂಜೆಮಾಡಿ ವಿಷ್ಣುವಿಗೆ ಪ್ರಿಯವಾದ ಮುದ್ಗಾನ್ನ ಅಂದರೆ ಹುಗ್ಗಿಯನ್ನೇ ನೈವೇದ್ಯ ಮಾಡುತ್ತಿರುತ್ತೇವೆ ಇದು ನಾಳೆಗೆ ಮುಗಿಯುತ್ತದೆ - ಎಷ್ಟೋಜನರಿಗೆ ಅನಿವಾರ್ಯ ಕಾರಣಗಳಿಂದಾಗಿ ತಿಂಗಳಿಡೀ ಹುಗ್ಗಿ ನೈವೇದ್ಯ ಮಾಡಲಾಗಿರುವುದಿಲ್ಲ - ಅಂತಹವರೂ ಸೇರಿ ನಾಳೆ ಹುಗ್ಗಿಯ ಸಾಮಾನುಗಳನ್ನು ಅಂದರೆ - ಹೆಸರುಬೇಳೆ , ಅಕ್ಕಿ ,ಬೆಲ್ಲ ,ತುಪ್ಪ , ಕೊಬ್ಬರಿ + ತರಕಾರಿ ಕುಂಬಳಕಾಯಿಯನ್ನು ದಕ್ಷಿಣೆ ಸಮೇತ ತಾಂಬೂಲದೊಂದಿಗೆ ಶ್ರದ್ಧಾಭಕ್ತಿಯಿಂದ ಬ್ರಾಹ್ಮಣರಿಗೆ ದಾನ ಮಾಡಿದಲ್ಲಿ --- ಜೀವಿತಾವಧಿಯಲ್ಲಿ ಪೂರಾ ಶಾಶ್ವತ ಸುಖ ಆಯುರಾರೋಗ್ಯ , ಧನಕನಕ ನೆಮ್ಮದಿ ಶಾಂತಿಯ ಜೊತೆ ಶ್ರೀ ಹರಿಯ ಕೃಪೆ ಸಿಗುವುದೆಂದು ಪುರಾಣಗಳಲ್ಲಿ ತಿಳಿಸಿದ್ದಾರೆ !!
ಇನ್ನು ಭಾನುವಾರ ೧೫ ಭಾನುವಾರಂದು " ಮಕರ ಸಂಕ್ರಾಂತಿ ಹಬ್ಬ" ಇದಕ್ಕೇ ಆದ ವಿಶೇಷ ಮಹತ್ವವಿದೆ ! - ಮಕರ ಸಂಕ್ರಮಣವೆಂದರೆ - ಜಗತ್ತಿಗೇ ದೇವನಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಮಕರಸಂಕ್ರಮಣ ಎನ್ನುತ್ತಾರೆ ! ಒಂದು ವರ್ಷದಲ್ಲಿ ೧೨ ಮಾಸಗಳು , ಅದನ್ನು ಎರಡು ಭಾಗ ಮಾಡಿರುವರು " ಉತ್ತರಾಯಣ ಹಾಗೂ ದಕ್ಷಿಣಾಯನ " ಎಂದು ! ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿ ಸೇರುವ ದಿನವನ್ನು " ಮಕರ ಸಂಕ್ರಾಂತಿ " ಎನ್ನುವರು ! ಇನ್ನು ೬ ತಿಂಗಳಕಾಲ ಉತ್ತರಾಯಣ ಪುಣ್ಯಕಾಲ , ಪುರಾಣ ಮತ್ತು ಇತಿಹಾಸದಲ್ಲಿ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ - ಈ ಸಮಯದಲ್ಲಿ ಸತ್ತವರಿಗೆ ನೇರ ಸ್ವರ್ಗಕ್ಕೇ ಪ್ರವೇಶವೆಂದೇ ನಂಬಿಕೆ !!
ಪಿತಾಮಹರಾದ ಭೀಷ್ಮರು ಶರಶಯ್ಯೆಯಲ್ಲಿ ಮಲಗಿ ಉತ್ತರಾಯಣ ಪುಣ್ಯಕಾಲ ಬರುವವರೆಗೂ ಕಾದಿದ್ದು ಸಾವನ್ನು ಬರಮಾಡಿಕೊಂಡರೆಂದು ನಾವೆಲ್ಲಾ ಮಹಾಭಾರತ ಕತೆಯಲ್ಲಿ ಓದಿದ್ದೇವೆ ಅಲ್ಲವೇ ? ( ಅವರು ಇಚ್ಛಾ ಮರಣಿಯಾಗಿದ್ದರು !! )
ಕೃತಯುಗದಲ್ಲಿ ಶಿವಪಾರ್ವತಿಯರ ವಿವಾಹವಾಗಿದ್ದು , ಬ್ರಹ್ಮದೇವನು ಈ ಜಗತ್ಯಿನ ಸೃಷ್ಟಿಯನ್ನು ಆರಂಭಿಸಿದ್ದು , ಸಮುದ್ರಮಥನದಲ್ಲಿ ಶ್ರೀ ಲಕ್ಷ್ಮೀ ಅವತರಿಸಿದ್ದು ಎಲ್ಲಾ ಈ ಉತ್ತರಾಯಣದಲ್ಲೇ ! ಆದ್ದರಿಂದ ಈ ಸಮಯದಲ್ಲಿ ವಿವಾಹ , ಗೃಹ ಪ್ರವೇಶ ಇತರೇ ಎಲ್ಲಾ ಶುಭಕಾರ್ಯಗಳಿಗೂ ತುಂಬಾ ವಿಶೇಷವಾದದ್ದಾಗಿದೆ !
ಇನ್ನು ಸಂಕ್ರಾಂತಿ ಹಬ್ಬದ ವಿಷಯಕ್ಕೆ ಬಂದರೇ ಸುಗ್ಗಿ ಕಾಲ ! ರೈತರು ತಾವುಬೆಳೆದ ಪೈರಿನ ರಾಶಿಗಳನ್ನು ಹಾಕಿ ಪೂಜಿಸಿ ಸಂಭ್ರಮಿಸುವ ದಿನ ಭತ್ತ ವಿಶೇಷವಾಗಿ ಕಬ್ಬು! ಹಬ್ಬದ ಸುಗ್ಗಿಯ ಸಂಕೇತವಾಗಿದೆ ! ಹಬ್ಬದ ದಿನ ಎಳ್ಳು ದಾನಮಾಡಬೇಕೆಂದಿದೆ ! ಎಳ್ಳು ಶನಿಮಹಾರಾಜನನ್ನು ಪ್ರತನಿಧಿಸುವ ಧಾನ್ಯ ! ಬರೀ ಎಳ್ಳನ್ನು ಮಾತ್ರಾ ದಾನಮಾಡದೇ ಇದೀಗ ತಾನೇ ಹೊಸಬೆಳೆ ಬೆಳೆದ - ಬೆಲ್ಲ , ಕೊಬ್ಬರಿ , ಹುರಿಗಡಲೆ ಎಳ್ಳು ಎಲ್ಲದರ ಮಿಶ್ರಣಮಾಡಿ ಸಂಕ್ರಾಂತಿಯಂದು ಕಬ್ಬು , ಬಾಳೆಹಣ್ಣಿನ ಸಮೇತ ಮನೆಯಲ್ಲಿ ದೇವರಪೂಜೆಮಾಡಿ , ನೈವೇದ್ಯಕ್ಕಿಡಬೇಕು . ಇನ್ನು ಹೊಸ ಅಕ್ಕಿ ಹೆಸರುಬೇಳೆ,ಬೆಲ್ಲತುಪ್ಪ ಕೊಬ್ಬರಿ ಸೇರಿಸಿ ಪೊಂಗಲ್ ಮಾಡಿ , ನೆಲಗಡಲೆ ಅವರೆ ಕೊಬ್ಬರಿ ಮೆಣಸು ಜೀರಿಗೆ ಸೇರಿಸಿ ಖಾರದ ಹುಗ್ಗಿ ಮಾಡಿ , ದೇವರಿಗೆ ನೈವೇದ್ಯ ಮಾಡಿ ಆ ಸೂರ್ಯನಾರಾಯಣನಿಗೆ ಅರ್ಪಣೆ ಮಾಡಿ ನಮಸ್ಕರಿಸ ಬೇಕು , ಸಂಜೆ ಎಲ್ಲರಿಗೂ ಬೀರಬೇಕು ! ಇಂದು ಮತ್ತೊಂದು ವಿಶೇಷ , ಸಂಕ್ರಮಣ ಸ್ನಾನ ! ನದೀ ಸಮುದ್ರಗಳಲ್ಲಿ ಸ್ನಾನ ಮಾಡಿ ಸೂರ್ಯನಿಗೆ ತರ್ಪಣ ಕೊಡುವುದೂ ಅತೀ ವಿಶೇಷವಾಗಿ ಉತ್ತರಭಾರತದಲ್ಲಿ ಆಚರಿಸುತ್ತಾರೆ !! ಕುಂಭಮೇಳದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ !!
ಮುಖ್ಯವಾಗಿ ಶಬರಿಮಲೈನಲ್ಲಿ ಇಂದು ಸ್ವಾಮಿ ಅಯ್ಯಪ್ಪನಿಗೆ ಅಭಿಷೇಕ ಪೂಜೆ ವಿಶೇಷ ಒಡವೆಗಳ ಅಲಂಕಾರ ಪೂಜೆ ಹಾಗೂ ಸಂಜೆವೇಳೆಗೆ ನಿಗದಿತ ಸಮಯಕ್ಕೆ ವಿಶೇಷವಾಗಿ ಮಕರಜ್ಯೋತಿ ದಿವ್ಯದರ್ಶನ !!
ಇನ್ನು ವೈಜ್ಞಾನಿಕವಾಗಿಯೂ ನೋಡಿದಾಗ ಚಳಿಗಾಲದಲ್ಲಿ ಚರ್ಮಗಳು ಒಡೆದು ಕಾಂತಿಹೀನವಾಗುವುದನ್ನು ಈ ಎಳ್ಳಿನ ಮಿಶ್ರಣ ತಪ್ಪಿಸುತ್ತದೆ !! ಅದರಲ್ಲಿರುವ ಎಳ್ಳು , ಕೊಬ್ಬರಿ , ಬೆಲ್ಲ , ಹುರಿಗಡಲೆ ಎಲ್ಲಾ ಮೈಗೆ ಕಾಂತಿಕೊಟ್ಟು ಶಾಖವನ್ನು ಉತ್ಪತ್ತಿ ಮಾಡಿ ಬೆಚ್ಚಗಿಡುತ್ತದೆ ! ನಮ್ಮ ಹಿರಿಯರ ಶಾಸ್ತ್ರ ಸಂಪ್ರದಾಯದಲ್ಲಿ ವೈಜ್ಞಾನಿಕವಾಗಿ ಸಾಮ್ಯತೆಯಿರುವುದನ್ನು ಪ್ರತೀಯೊಂದರಲ್ಲೂ ಕಾಣಬಹುದು !!!
ಇನ್ನು ಈ ಸಂಕ್ರಾಂತಿಯ ಹಬ್ಬವನ್ನು ದೇಶದ ವಿದೇಶಗಳಲ್ಲಿ ಎಲ್ಲಾ ಕಡೆಯೂ ಆಚರಿಸುತ್ತಾರೆ , ತಮಿಳುನಾಡಿನಲ್ಲಿ , ಆಂಧ್ರದಲ್ಲಿ , ಕೇರಳದಲ್ಲಿ , ಮಹಾರಾಷ್ಟ್ರದಲ್ಲಿ ಕೂಡಾ ಈ ಹಬ್ಬ ಬಹಳ ಜೋರು ! ಆಚರಣೆಯಲ್ಲಿ ಹೆಸರಲ್ಲಿ ವ್ಯತ್ಯಾಸ ಅಷ್ಟೇ ! ಎಲ್ಲಾ ಕಡೆಯೂ ಸಿಹಿಪೊಂಗಲ್ , ಎಳ್ಳುಬೆಲ್ಲದ ಮಿಶ್ರಣ , ಕಬ್ಬು ಇವುಗಳೇ ವಿಶೇಷವಾಗಿದೆ !
ಸೂರ್ಯದೇವನ ಆರಾಧನೆಯೇ ಇಂದು ಪ್ರಮುಖವಾಗಿದೆ ಎನ್ನಬಹುದು ! ಮಹಾರಾಷ್ಟ್ರ ದಲ್ಲಿ ಎಳ್ಳಿನ ಮಿಶ್ರಣದಿಂದ ಉಂಡೆಮಾಡಿ ಹಂಚುತ್ತಾರೆ !
ಇನ್ನು ಬೆಳಗಿನ ಪೂಜೆ ನೈವೇದ್ಯ ಊಟ ಎಲ್ಲಾ ಮುಗಿಸಿ ಸಂಜೆಯಲ್ಲಿ ಮನೆಯ ಹೆಣ್ಣುಮಕ್ಕಳ ಸಡಗರ ಸಂಭ್ರಮ ಅತೀಜೋರು !! ಒಂದುವಾರವಿಡೀ ಕಷ್ಟಪಟ್ಟು ಹಬ್ಬಕ್ಕೆ ತಯಾರಿಸಿದ ಸಕ್ಕರೆ ಅಚ್ಚು + ಎಳ್ಳು + ಬಾಳೆಹಣ್ಣು ಕಬ್ಬು ಎಲ್ಲವನ್ನೂ ಚೀಲಗಳಲ್ಲಿ ತುಂಬಿಸಿಕೊಂಡು , ಹೊಸ ಬಟ್ಟೆ ಧರಿಸಿ , ಸಿಂಗಾರವಾಗಿ ಎಲ್ಲಾ ನೆಂಟರಿಷ್ಟರ ಮನೆ ಮನೆಗೂ , ಸ್ನೇಹಿತರ ಮನೆಗೂ , ಅಕ್ಕಪಕ್ಕದ ಮನೆ ಗಳಿಗೂ ಎಳ್ಳುಬೀರುವ ಅವರ ಸಂಭ್ರಮವನ್ನು ನೋಡಲು ಎರಡು ಕಣ್ಣು ಸಾಲದು !!! (ನಾವು ಬಾಲ್ಕನಿಯಲ್ಲಿ ಕೂತು ನೋಡುತ್ತಿರುತ್ತೇವೆ ) ಅವರ ಸಂತಸ ಸಡಗರ ಸಂಭ್ರಮ ಹಬ್ಬದ ಖುಷಿಯನ್ನು ಹೆಚ್ಚಿಸುತ್ತದೆ ! ಸಂಜೆ ದೇವರ ದೀಪ ಬೆಳಗಿಸಿ ಮನೆಯಲ್ಲಿ ಸಣ್ಣ ಮಕ್ಕಳು ಮೊಮ್ಮಕ್ಕಳಿದ್ದರೆ ಕನಿ ಎರೆಯುತ್ತಾರೆ ! ಎಂದರೇ ಸಣ್ಣಗೆ ಹೆಚ್ಚಿದ ಕಬ್ಬು ಹಣ್ಣು ಚಿಲ್ಲರೆ ಕಾಸು ಬೆಳ್ಳಿಬಟ್ಟಲಿನಲಿ ತುಂಬಿ ಮಕ್ಕಳ ತಲೆಮೇಲೆ ಸುರಿಯುವುದು .
ಇನ್ನು ಕೆಲವರ ಮನೆ ಸಂಪ್ರದಾಯದಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳ ಕೈಲಿ ಸಂಕ್ರಾಂತಿ ಬಾಗಿನ ಕೊಡಿಸುವ ಪದ್ಧತಿ ಉಂಟು ! ಮೊದಲನೇ ವರ್ಷ ಐದು ಬಾಳೆಹಣ್ಣಿನ ಜೊತೆ , ತೆಂಗಿಕಾಯಿ , ಬ್ಲೋಸ್ ಪೀಸ್ , ಎಲಚೆಹಣ್ಣು , + ಸಂಕ್ರಾತಿ ಎಳ್ಳಿನ ಸಾಮಾನುಗಳನ್ನುಇಟ್ಟು ಎಲೆಅಡಿಕೆ ದಕ್ಷಿಣೆ ಸಮೇತ ಐದು ಜನ ಹಿರಿಯ ಮುತ್ತೈದೆಯರಿಗೆ ಕೊಡಿಸುತ್ತಾರೆ ! ಇದನ್ನು ಐದು ವರ್ಷಗಳ ಕಾಲ -- ಐದರಷ್ಟು ಹಣ್ಣುಗಳನ್ನು ಹೆಚ್ಚಿಸಿ ಕೊಡುತ್ತಾ ಅಷ್ಟರಲ್ಲಿ ಮಗುವಾದರೆ ಬಾಗಿನದ ಜೊತೆ ಗಂಡು ಮಗುವಾದರೆ ಪುಟ್ಟ ಬೆಳ್ಳಿ ಕೃಷ್ಣನನ್ನು ಕೊಬ್ಬರಿ ಬಟ್ಟಲಲ್ಲಿಟ್ಟು , ಹೆಣ್ಣು ಮಗುವಾದರೆ ಕೊಬ್ಬರಿ ಬಟ್ಟಿನಲ್ಲಿ ಬೆಳ್ಳಿಬಟ್ಟಲನ್ನಿಟ್ಟು ಆದಿವಸ ಬಾಗಿನ ಕೊಡಿಸುವರು !!! ನಮ್ಮಲ್ಲಿ ಆಚರಣೆಯಲ್ಲಿರುವ ಹಬ್ಬಗಳ ಸಂಪ್ರದಾಯವನ್ನು ಅದೆಷ್ಟು ಹೇಳಿದರೂ ಸಾಲದು !! ಎಲ್ಲಾ ದಾನಧರ್ಮ ಮಾಡಿಸಲು ಮತ್ತು ಹಬ್ಬದ ನೆವದಲ್ಲಾದರೂ ನೆಂಟರಿಷ್ಟರ ಮನೆಗಳಿಗೆ ಹೋಗಿ ಬರಲೆಂದೇ ಈ ಪದ್ಧತಿಗಳನ್ನು ಮೇಲ್ಪಂಕ್ತಿಯಾಗಿಸಿದ್ದಾರೆ ನಮ್ಮ ಹಿರಿಯರು !!!
ಇನ್ನು ಕೊನೆಯದಾಗಿ ಇಂದು ಎತ್ತು ದನಕರುಗಳಿಗೆ ವಿಶ್ರಾಂತಿನೀಡಿ ಬೆಳಗ್ಗೆ ಅವುಗಳನ್ನು ಚೆನ್ನಾಗಿ ತೊಳೆದು ಸ್ನಾನಮಾಡಿಸಿ ಮೈಗೆಲ್ಲಾ ಬಣ್ದಣಗಳನ್ನು ಹಚ್ಚಿ ಸಿಂಗರಿಸಿ ಕೊಟ್ಟಿಗೆ ಶುದ್ಧ ಮಾಡಿ ಕಟ್ಟಿ , ದೇವರ ಪೂಜಾನಂತರ ಹಸುಗಳಿಗೂ ಪೂಜಿಸಿ ಹೂಹಾರ ಹಾಕಿ ಗೋಮಾತೆಗೆ ಗೋಗ್ರಾಸವನ್ನಿಟ್ಟು ಮಂಗಳಾರತಿ ಮಾಡಿ ನಮಿಸಬೇಕು ! ಭೂಮಾತೆ ಗೋಮಾತೆ ಹೆತ್ತ ಮಾತೆಗೆ ಸಮ ! ಸಂಜೆ ಆಯಾ ಬಡಾವಣೆಯಲ್ಲಿ ರಸ್ತೆಯಮಧ್ಯಭಾಗದಲ್ಲಿ ಒಣಹುಲ್ಲಿನ ಕಿಚ್ಚುಹಚ್ಚಿ ಅದರ ಮೇಲೆ ಎತ್ತು ಹಸು ಕರುಗಳನ್ನು ಹಾರಿಸಿ ದಾಟಿಸಿಸುತ್ತಾರೆ ! ಅವುಗಳ ದೃಷ್ಟಿಪರಿಹಾರವಾಗಲೆಂದು ಮಾಡುವ ಇದಕ್ಕೆ ಕಿಚ್ಚುಹಾಯಿಸುವುದೆನ್ನುವರು !!!
ಸ್ನೇಹಿತರೇ , ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ! ಸಂಕ್ರಾಂತಿ ಹಬ್ಬ ಮುಗಿದರೂ ಎಳ್ಳು ಬೀರುವುದು ಒಂದೇ ದಿವಸಕ್ಕೆ ಮುಗಿಯುವುದಿಲ್ಲ ! ಇದು ಒಂದು ವಾರದವೆಗೂ ನೆಡೆಯುವ ಹಬ್ಬ ! ರಜಾದಿವಸಗಳಲ್ಲಿ , ಬಿಡುವಾದಾಗ ಹೋಗಿ ನೆಂಟರಿಷ್ಟರನ್ನು ಭೇಟಿಯಾಗಿ ಕ್ಷೇಮಸಮಾಚಾರ ವಿಚಾರಿಸಿ ಎಳ್ಳುಬೀರಿ ನಾಲ್ಕಾರು ಒಳ್ಳೆಯ ಮಾತುಗಳನ್ನಾಡಿ ಬನ್ನಿ ! " ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡಿ " ಎಂಬುದೇ ಹಬ್ಬದ ಸ್ಲೋಗನ್ !! ಬಿಡುವಿನ ದಿವಸವೇ ಬೇಕಾದ ಎಲ್ಲಾ ಸಾಮಾನುಗಳನ್ನು , ಎಳ್ಳಿನ ವಿಧವಿಧವಾದ ಡಬ್ಬಿಗಳನ್ನು , ಬಳೆ ಅರಿಶಿನಕುಂಕುಮ ಬಾಗಿನದ ಸಾಮಾನು ಎಲ್ಲಾ ತಂದಿಟ್ಟುಕೊಳ್ಳಿ ! ಹಬ್ಬವನ್ನು ಎಲ್ಲರೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿ ! ಮತ್ತೆ ಸಂಕ್ರಾಂತಿಯಂದು ಸಿಗೋಣ ಎಳ್ಳುಬೆಲ್ಲದ ಜೊತೆ ! ಒಳ್ಳೊಳ್ಳೆಯ ಮಾತನಾಡುತ್ತಾ ! ಏನಂತೀರಿ ?
ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🙏
ಉತ್ತರಾಯಣ ಪುಣ್ಯ ಕಾಲ
ಸಂಕ್ರಮಣ ಪರ್ವ ಕಾಲ
ಸೂರ್ಯ ಪಥ ಬದಲಿಸುವನು
ಸೂರ್ಯ ರಥ ಏರಿ ಬರುವನು
ಸೃಷ್ಟಿ ನಮಗೆ ಕಲಿಸುವ ಪಾಠ
ಸೃಷ್ಟಿ ಸತ್ಯ ನೂತನ ನೋಟ
ನಮ್ಮ ದೇಹವೆಂಬ ರಥದಲ್ಲಿ
ಹೃದಯವೆಂಬ ಮಂದಿರದಲ್ಲಿ
ಪ್ರೀತಿ ಎಂಬ ಸೂರ್ಯನು
ನಿತ್ಯ ಉದಯಿಸುತ್ತಿರಲಿ
ಕೇವಲ ಎಳ್ಳು ಒಂದೇ ರುಚಿಸಲ್ಲ
ಬೆಲ್ಲ ಬೆರತಾಗಅದಕ್ಕೊಂದುಬೆಲೆ
ಮಾತಿನಲ್ಲಿ ಇರಬೇಕು ನಮ್ಮಲ್ಲಿ
ವಿನಯಸುಮಧುರ ವಾಣಿಯಲಿ
ಎಳ್ಳು ಬೆಲ್ಲವ ಕೊಡೋಣ
ಸಿಹಿಯಾಗಿ ಮಾತಾಡೋಣ
✍️ ಪ್ರಿಯಾ ಪ್ರಾಣೇಶ ಹರಿದಾಸ
Comments
Post a Comment