ಲೇಖನ :- ದಾಸ ಸಾಹಿತ್ಯ ಪಥ ಹಿಡಿದ ಶ್ರೀ ಮಹಿಾತಿದಾಸರ ಸುತ ಶ್ರೀ ಕೃಷ್ಣ ದಾಸರು





ಲೇಖನ :- ದಾಸ ಸಾಹಿತ್ಯ ಪಥ ಹಿಡಿದ ಶ್ರೀ ಮಹಿಪತಿದಾಸರ ಸುತ ಶ್ರೀ ಕೃಷ್ಣದಾಸರು



ಮಹಿಪತಿದಾಸರು ಮತ್ತು ತಿರುಮಲಾಬಾಯಿಗೆ ಸಾರವಾಡದ ಗುರುಭಾಸ್ಕರ ಸ್ವಾಮಿಗಳ ಅನುಗ್ರಹದಿಂದ ದೇವರಾಯರು ಮತ್ತು ಕೃಷ್ಣರಾಯರು ಎಂಬ ಪುತ್ರ ಸಂತಾನವಾಯಿತು . ಇವರ ಜೊತೆಗೆ ತಾಯಿಯಂತೆ ಇದ್ದ ಶ್ರೀ ಮಹಿಪತಿರಾಯರ ಅತ್ತಿಗೆಯಾದ ತುಕ್ಕವಳು ಇರುತ್ತಿದ್ದರು.

`ಮಹಿಪತಿದಾಸರು ಯೋಗಸಾಧನೆ ಮಾಡಿದ ನಂತರ ಸಂಸಾರದಲ್ಲಿ ಕಂಸಾರಿಯ ಸ್ಮರಣೆ ಜಪತಪ, ಅನುಷ್ಠಾನ ಮಾಡುತ್ತಾ ಕಾಲ ಕಳೆಯುತ್ತ, ಜಲದಲ್ಲಿನ ಕಮಲದಂತೆ ಭವದ ಹಂಗು ಇಟ್ಟುಕೊಳ್ಳದೆ ಭಗವಂತನಲ್ಲಿ ಚಿತ್ತವಿಟ್ಟು ನಿರ್ಲಿಪ್ತರಾಗಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ತಿರುಮಲಾಬಾಯಿ ಹರಿಪಾದ ಸೇರಿದರು. ಮುಂದೆ ನೈಮಿತ್ತಿಕ ಕರ್ಮಗಳನ್ನು ಮಾಡಿ ಯಥಾಸ್ಥಿತಿಯಾಗಿ ಮತ್ತೆ ತಮ್ಮ ಕರ್ಮಗಳಾದ ಯೋಗ “ ಅನುಷ್ಠಾನ ಜಪತಪದಲ್ಲಿ ತೊಡಗಿಕೊಂಡರು.

ಮಹಿಪತಿದಾಸರ ಆಶ್ರಯದಲ್ಲಿ ದೊಡ್ಡಮ್ಮಳಾದ ತುಕ್ಕವ್ವಳ ಆರೈಕೆಯಲ್ಲಿ ಮಕ್ಕಳು ಬೆಳೆಯತೊಡಗಿದರು. ಮಕ್ಕಳ ಸ್ವಭಾವ, ತುಂಟತನ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಇದರಿಂದ ಬೇಸತ್ತ ತುಕ್ಕವ್ವ, ಒಂದು ದಿನ ಮಹಿಪತಿರಾಯರು ಅನುಷ್ಠಾನ ಮುಗಿಸಿ ಬಂದ ಮೇಲೆ ಮಕ್ಕಳ ತುಂಟತನದ ಬಗ್ಗೆ ಹೇಳಿದಾಗ ತಾಯಿಯಂತೆ ಇದ್ದ ಅತ್ತಿಗೆಯಾದ ತುಕ್ಕವ್ವಳಿಗೆ 'ಏನೂ ಬೇಸರ ಪಡಬ್ಯಾಡರಿ, ನಾಳೆ ನನ್ನ ಹತ್ತಿರ ಕರೆದುಕೊಂಡು ಬನ್ನಿ' ಎಂದು ಹೇಳಿದರು.

ಅದರಂತೆ ತುಕ್ಕವ್ವ, ಮರುದಿನ ಇ ಮಕ್ಕಳಿಬ್ಬರಿಗೂ ಸ್ನಾನ ಮಾಡಿಸಿ,
ಸಂಧ್ಯಾವಂದನೆಗಳು ಮಾಡಿದ ನಂತರ ಮಹಿಪತಿರಾಯರ ಮುಂದೆ ಕರೆದುಕೊಂಡು ಹೋದರು. ಆಗ ಮಹಿಪತಿರಾಯರು ಮಕ್ಕಳನ್ನು ಕೂಡಿಸಿಕೊಂಡು, ಅವರತ್ತ ನಗೆಬೀರಿ ತಮ್ಮ ವರದ ಹಸ್ತವಿಟ್ಟರು. ಕೂಡಲೇ ಮಕ್ಕಳಿಬ್ಬರ ದೇಹದೊಳಗೆ ಶಕ್ತಿಯ ಸಂಚಲನದ ಅನುಭವವಾಯಿತು. ದಿವ್ಯದೃಷ್ಟಿ ಬೀರಿ ಆಶೀರ್ವದಿಸಿ ಬುದ್ದಿಮಾತು ಹೇಳಿ ಕಳುಹಿಸಿದರು. ಮುಂದೆ ಇವರಿಬ್ಬರಲ್ಲಿ ಮಹತ್ತರ ಬದಲಾವಣೆಗಳಾದವು. ಓರಿಗೆಯವರ ಜೊತೆ ತುಂಟತನ ಬಿಟ್ಟರು. ಸ್ತೋತ್ರ, ವೇದಪಾಠ ಜಪತಪದಲ್ಲಿ ಕಾಲ ಕಳೆಯತೊಡಗಿದರು. ಮುಂದೆ ಒಂದು ದಿನ ಕಲಬುರ್ಗಿಯಿಂದ ದೇಶಮುಖರು  ಅಂದರೆ (ತಿಮ್ಮವ್ವಳ ತಂದೆತಾಯಿ) ಅಜ್ಜಾ ಅಜ್ಜಿ ಮೊಮ್ಮಕ್ಕಳನ್ನು ನೋಡಲು ಬಂದರು.  ಮಗಳ (ತಿಮ್ಮವ್ವ್ ) ನೆನಪಿಗಾಗಿ ದೇವರಾಯರನ್ನು ಕರೆದುಕೊಂಡುಹೋಗಿ ಸಲಹುವುದಾಗಿ ಹೇಳಿದರು.

ಮಹಿಪತಿದಾಸರು ತಮ್ಮ ಅಪರೋಕ್ಷಜ್ಞಾನದಿಂದ ದೇವರಾಯರ ಎಲ್ಲರ ಮುಂದಿನ ಜೀವನದ ಆಗುಹೋಗುಗಳ ಬಗ್ಗೆ ತಿಳಿದು, ದೇಶಮುಖರ ಜೊತೆ ಕಳುಹಿಸಿದರು. ಸಹೋದರರಿಬ್ಬರಿಗೂ ಅಗಲುವಿಕೆಯ ನೋವಾಯಿತು. ಆದರೆ ಇಬ್ಬರೂ ಪ್ರಬುದ್ಧರಾಗಿದ್ದ ಕಾರಣ; ಕೆಲವೇ ದಿನಗಳಲ್ಲಿ ತಾವಿರುವ ಪರಿಸರಕ್ಕೆ ಹೊಂದಿಕೊಂಡರು.

ಒಂದು ದಿನ ಮಹಿಪತಿರಾಯರು ಕೃಷ್ಣದಾಸರನ್ನು ಕರೆದು ತಮ್ಮ ವರದ ಹಸ್ತವನ್ನಿಟ್ಟು ಬೀಜಾಕ್ಷರ ಮಂತ್ರವನ್ನು ಉಪದೇಶಿಸಿದರು. ಆಗ ಬಿಂಬಮೂರ್ತಿಯಲ್ಲಿ ಚಿನ್ಮಯನ ದರುಶನವಾಯಿತು. ಆಗ ಇವರೇ ನನ್ನ ಸ್ವರೂಪೋದ್ಧಾರಕ ಗುರುಗಳು ಎಂದು ಅರಿತು ಪಾದಕ್ಕೆರಗಿದರು.

ಹೀಗೆ ತಂದೆಯನ್ನೇ ಗುರುವನ್ನಾಗಿ ಮಾಡಿಕೊಂಡು ಅವರ ಹಾದಿಯಲ್ಲಿ ಜಪತಪ ಅನುಷ್ಠಾನ ಮಾಡುತ್ತ ದೇಶ ಈಶ ಸೇವೆ ಮಾಡುತ್ತಿದ್ದರು. ಕಠೋರ ಸಾಧನೆ ಮಾಡುತ್ತ, ಅಪರೋಕ್ಷ ಜ್ಞಾನವನ್ನು ಹೊಂದಿದರು. ಸಾಹಿತ್ಯ ರಚಿಸತೊಡಗಿದರು.

ಒಂದು ದಿನ ಕೃಷ್ಣದಾಸರು ಸಾಹಿತ್ಯ ರಚಿಸತೊಡಗಿದಾಗ... ಮಹಿಪತಿರಾಯರಿಗೆ ಗೊತ್ತಾಯಿತು. ಕೂಡಲೆ ಮಗನಿಗೆ ಎಲ್ಲ ಸಾಹಿತ್ಯ ತೋರಿಸಲು ಹೇಳಿದರು. ಅದರಂತೆ ಕೃಷ್ಣದಾಸರು ತಾವು ರಚಿಸಿರುವ ಎಲ್ಲ ಸಾಹಿತ್ಯ ತೋರಿಸಿದಾಗ ಅವುಗಳನ್ನು ಪರಿಶೀಲಿಸಿ, ಮೊದಲು ಶ್ರೀಹರಿಯ ಮಂಗಳಾಚರಣೆ ಬರೆಯದ ಈ ಎಲ್ಲ ಸಾಹಿತ್ಯ ವ್ಯರ್ಥ, ನೀನು ಗಂಗೆಗೆ (ಕೃಷ್ಣಾನದಿ) ಸಮರ್ಪಿಸಿ ಮತ್ತೇ ಶ್ರೀಹರಿಯ ಮಂಗಳಾಚರಣೆ ಬರೆಯುವುದರೊಂದಿಗೆ ಪುನಃ ಪ್ರಾರಂಭಿಸು ಎಂದು ಹೇಳಿದರು.

ಅದರಂತೆ ತಂದೆಯ ಗುರುವಾಜ್ಞೆಯನ್ನು ಪಾಲಿಸಿದರು. ಮತ್ತೆ ಸಾಹಿತ್ಯವನ್ನು ಶ್ರೀಶನ ಶ್ರೀಕಾರದ ಮಂಗಳಾಚರಣೆಯಿಂದ ಪ್ರಾರಂಭಿಸಿದರು.

ಹೀಗೆ ಒಂದು ದಿನ ತುಕ್ಕವಳು ಜೀವನ ಯಾತ್ರೆ ಮುಗಿಸಿದಳು , ಜೀವನದ ಮಹಿಪತಿರಾಯರು ಮತ್ತು ಇಬ್ಬರು ಮಕ್ಕಳು ಜೀವನದಲ್ಲಿ ಬಂದ ವಿಷಮಗಳಿಗೆಯನ್ನು ಸಮಾನ ಚಿತ್ತದಿಂದ ಸ್ವೀಕರಿಸಿದರು.

ಮುಂದೆ ಮಹಿಪತಿರಾಯರು ಮಗನು ತಾರುಣ್ಯಕ್ಕೆ ಕಾಲಿಟ್ಟಿದ್ದು ಅರಿತು; ಕೃಷ್ಣರಾಯರನ್ನು ಕರೆದು ಮದುವೆಯ ವಿಷಯ ಹೇಳಿ ಗೃಹಸ್ಥಜೀವನಕ್ಕೆ ಕಾಲಿಡಬೇಕು' ಎಂದರು. ಕೃಷ್ಣರಾಯರು ನಿರ್ಭಾವದಿಂದ ಪ್ರತಿಕ್ರಿಯಿಸಿದಾಗ, ಮಗನಿಗೆ ಸಂಪ್ರದಾಯದಂತೆ ಚತುರ ಆಶ್ರಮಗಳಲ್ಲಿ ನಡೆಯಬೇಕು. ನಡೆದು ಭವಸಾಗರದಲ್ಲಿ ಇದ್ದು ಜಯಿಸಬೇಕೆಂದು ಹೇಳಿದರು.

ಮುಂದೆ ಹೊನವಾಡ ಗ್ರಾಮದ ಪ್ರಸಿದ್ಧ ಮನೆತನದ ಕುಲಕರ್ಣಿ ದಂಪತಿಗಳ ಸದ್ಗುಣಿಯಾದ ಸುಪುತ್ರಿ ರಾಧಾಬಾಯಿ ಜೊತೆ ಕೃಷ್ಣರಾಯರ ವಿವಾಹವಾಯಿತು. ಮಹಿಪತಿರಾಯರ ಸಮ್ಮುಖದಲ್ಲಿ ಹಿರಿಯ ಮಗ ದೇವರಾಯ ತಂದೆ ತಾಯಿ ಸ್ಥಾನದಲ್ಲಿ ನಿಂತು ಕೃಷ್ಣರಾಯರ ವಿವಾಹ ನೆರವೇರಿಸಿದರು.

ಹೀಗೆ ಮನೆಯಲ್ಲಿ ಅತಿಥಿ ಉಪಚಾರ, ಊಟ, ವಸತಿ ನಡೆಯುತ್ತಿತ್ತು.  ಮಹಿಪತಿರಾಯರಿಗೆ ಅಪರೋಕ್ಷ ಜ್ಞಾನದಿಂದ ತಮ್ಮ ಕೊನೆಗಳಿಗೆ ಅರಿತು. ಜಾಲವಾದಿಯಲ್ಲಿದ್ದ ಹಿರಿಯ ಮಗ, ಕಿರಿಯ ಮಗನ ಜೊತೆ, ಕೊಲ್ಹಾರಕ್ಕೆ ಹೋಗಿ ಕೃಷ್ಣ ನದಿಯ ದಂಡೆಯ ಮೇಲೆ ಕುಳಿತು ಛಟ್ಟಿ ಅಮಾವಾಸ್ಯೆಯಂದು ದೇಹವನ್ನು ತ್ಯಜಿಸಿ ವೈಕುಂಠಕ್ಕೆ ತೆರಳಿದರು. ಎಲ್ಲ ಕರ್ಮ ಮುಗಿಸಿ ಮಕ್ಕಳಿಬ್ಬರು ಕರ್ಮದ ಜೊತೆ ಧರ್ಮ, ಅತಿಥಿ ಅಭ್ಯಾಗತರ ಸೇವೆ ನಿರಂತರ ನಡೆಸಿದರು

ಕೃಷ್ಣರಾಯರಿಗೆ ಏಳು ಜನ ಮಕ್ಕಳು ರಾಮಚಂದ್ರ, ಯಾರಪ್ಪ, ಗುರುಪ್ಪ, ಯತಿರಾಯ, ಶ್ರೀಪತಿ, ಗಿರೆಪ್ಪ, ದೇವಪ್ಪ, ಇವರೆಲ್ಲರೂ ಮನೆತನದ ಸಂಸ್ಕಾರ ಮತ್ತು ಅಧ್ಯಾತ್ಮ ಹಾದಿಯನ್ನು ಮುಂದುವರಿಸಿದರು. ಎಲ್ಲರೂ ತಂದೆಯನ್ನೇ ಗುರುವನ್ನಾಗಿಸಿಕೊಂಡು, ಮಂತ್ರೋಪದೇಶ ಪಡೆದು ವೇದಶಾಸ್ತ್ರ ಓದುತ್ತ: ಮಹಿಪತಿರಾಯರು ಮತ್ತು ತಂದೆ ಕೃಷ್ಣರಾಯರ ಅಧ್ಯಾತ್ಮದ ಹಾದಿಯಲ್ಲಿ ನಡೆದರು.

ಮಕ್ಕಳು ತಾರುಣ್ಯಕ್ಕೆ ಕಾಲಿಡಲು, ಯೋಗ್ಯ ವಯಸ್ಸಿಗೆ ಅವರ ಮದುವೆ ಮಾಡಿ: ಕೃಷ್ಣರಾಯರು ತಮ್ಮ ಸಂಸಾರದ ಕರ್ತವ್ಯ ಮುಗಿಸಿದರು. ತಂದೆ ಮಹಿಪತಿರಾಯರ ವೃಂದಾವನದ ಅನತಿ ದೂರದಲ್ಲಿ ಇವರು ಜಪತಪ ಅನುಷ್ಠಾನ ಮಾಡುತ್ತಿದ್ದರು.

ಹೀಗೆ ಕೃಷ್ಣರಾಯರಿಗೆ ಒಂದು ದಿನ ತಮ್ಮ ಅವಸಾನದ ಕಾಲ ಹತ್ತಿರ . ಬಂದಿತೆಂದು ಅಪರೋಕ್ಷ ಜ್ಞಾನದಿಂದ ತಿಳಿದು, ತಮ್ಮ ಮಕ್ಕಳೆಲ್ಲರನ್ನು ಕರೆಯಿಸಿದರು. ಎಲ್ಲರಿಗೂ ಮಹತ್ತರ ವಿಷಯ ಹೇಳಿದರು. ನಮ್ಮ ಗುರುಮಹಿಪತಿ ಸಂಸ್ಥಾನಕ್ಕೆ ಅನೇಕ ಫಲವತ್ತಾದ ಭೂಮಿಗಳು ಇವೆ. ಅವುಗಳ ಮೇಲ್ವಿಚಾರಣೆ ಮಾಡುತ್ತ ಅಜ್ಜ ಗುರುಮಹಿಪತಿರಾಯರ ಆರಾಧನೆಗೆ ಕೊರತೆ ಬರದಂತೆ ಮಾಡಿಕೊಂಡು ಹೋಗಲು ಹೇಳಿದರು. ಹಾಗೇ ನಾನು ಮೂರು ದಿನಗಳವರೆಗೆ ಶ್ರೀಹರಿ ಧ್ಯಾನ ಮಾಡುತ್ತ. ಭೌತಿಕ ಶರೀರ ತ್ಯಜಿಸುವೆ ಎಂದು ಹೇಳಿದರು.
ಮುಂದೆ ಕೃಷ್ಣರಾಯರ ಮಕ್ಕಳು ಹಿರಿಯರ ಸಮ್ಮುಖದಲ್ಲಿ ದ್ವಾದಶ ಸಾಲಿಗ್ರಾಮಗಳಿಂದ ವೃಂದಾವನ ನಿರ್ಮಿಸಿ,  ಮಾಘ ಶುದ್ಧ ಭೀಮ ದ್ವಾದಶಿಯಂದು ಆರಾಧನೆ ಮಾಡುತ್ತ ಬಂದಿದ್ದಾರೆ.

ಇವರು ತಮ್ಮ ತಂದೆಯಂತೆ  ಬಹುಭಾಷಾ ಪರಿಣತರು. ಅನುಭಾವಿಗಳು. ಕೃತಿಗಳಲ್ಲಿ ಸಾಮಾಜಿ ಕಳಕಳಿ‌ ಮತ್ತು ಪಾರಾಮಾರ್ಥಿಕ ಸಾಧನೆಗೆ ಪೂರಕವಾಗಿರುವ ಕೀರ್ತನೆಗಳನ್ನು ರಚಿಸಿದ್ದಾರೆ. ಇವರು ಸಾವಿರಾರು ಬಿಡಿ ಕೀರ್ತನೆಗಳನ್ನು ರಚಿಸಿದ್ದಾರೆ.
ಗಜೇಂದ್ರ ಮೋಕ್ಷ ,ಪ್ರಲ್ಹಾದ ಚರಿತೆ,
ವಾಮನ ಚರಿತೆ,ಸುಧಾಮ ಚರಿತೆ ಮುಂತಾದ ಭಾಗವತರ ಚರಿತ್ರೆಗಳನ್ನು ಖಂಡ ಕಾವ್ಯದಲ್ಲಿ ರಚಿಸಿದ್ದಾರೆ.ಭಾಗವತದ  ದಶಮಸ್ಕಂದ ಶ್ರೀ ಕೃಷ್ಣನ ಚರಿತ್ರಯನ್ನು
"ಶ್ರೀ ಕೃಷ್ಣಚರಿತಾಮೃತ" .
ಇದರಲ್ಲಿ ೫೨ ಪದ್ಯಗಳು,
೫೮ ಶ್ಲೋಕಗಳು, ೪ ಚಾಮರಿಗಳು,
೨ ಸವಾಯಿಗಳು,೨ ರಗಳೆ, ೧ ಉಗಾಭೋಗ ಇತ್ಯಾದಿಗಳು ಇವೆ. ಹಾಗೇ ಇದರ ವೈಶಿಷ್ಟ್ಯ.

ಇನ್ನೊಂದು  ಕೃತಿಯಾದ
"ಶ್ರೀ ಭಾವಾರ್ಥಸಪ್ತಕಾಂಡ ರಾಮಾಯಣ" ಕೃತಿಯಲ್ಲಿ
ಬಾಲಕಾಂಡ,ಅಯೋದ್ಯಕಾಂಡ,
ಅರಣ್ಯ ಕಾಂಡ, ಉತ್ತರಕಾಂಡ,
ಅಹಿರಾವಣಮಹಿರಾವಣ ಕಥಾ,
ಶ್ರೀರಾಮನ ಪಟ್ಟಾಭಿಷೇಕ ಇತ್ಯಾದಿ ವಿಷಯಗಳಿವೆ. ಇದರಲ್ಲಿ ೧೧೬ ಪದ್ಯಗಳು,೧೫೮ ಶ್ಲೋಕಗಳು,೨೩ ಸವಾಯಿಗಳು,೩ ಚಾಮರಿಗಳು,೩ ಭಾಮಿನಿ ಷಟ್ಪದಿಗಳು,೨ಪರಿವರ್ಧಿನಿ, ೧ ವಾರ್ಧಿಕ ಷಟ್ಪದಿ, ೧ ಉಗಾಭೋಗ,೧ ಮಂಗಳಾಷ್ಟಕ ಒಳಗೊಂಡಿದೆ. ಅನೇಕ ಕೀರ್ತನೆಗಳು
ಹಲವು ಕೃತಿಗಳಾದ ರಾಮಕೃಷ್ಣ ಭಕ್ತರ ಸಂವಾದ, ಅಹಂಕಾರ ಬೋಧ ಸಂವಾದ,ಕೊರವಂಜಿ ಪದ್ಯಗಳು, ಅಕ್ಕಿ ಥಳಿಸುವ ಪದ್ಯಗಳು ಅನುಭವದುಟಣಿ , ನವರಾತ್ರಿ ಜಾತ್ರೆಯ ಪದ್ಯಗಳು.

ಶ್ರೀಹರಿಯ ರಾಮ,ಕೃಷ್ಣ,ವೇಂಕಟೇಶ, ದತ್ತ ಮುಂತಾದ ಅವತಾರ ವಿಷಯಗಳ ಮಹಿಮೆಯ ಪದ್ಯಗಳನ್ನು ರಚಿಸಿದ್ದಾರೆ. ತಾರತಮ್ಯೋಕ್ತ ದೇವತೆಗಳ ಪದ್ಯಗಳನ್ನು ರಚಿಸಿದ್ದಾರೆ ಇನ್ನು ವಿಶೇಷವೆಂದರೆ ಪ್ರಾಣದೇವರ ಮೇಲೆ ಕನ್ನಡ ಮತ್ತು ಮರಾಠಿ ೧೫ರಷ್ಟು ಪದ್ಯಗಳನ್ನು ರಚಿಸಿದ್ದಾರೆ ಹಾಗೇ ರುದ್ರ ದೇವರ ಮೇಲೆ ಕನ್ಮಡ ಮತ್ತು ಮರಾಠಿಯಲ್ಲಿ ೩೦ ಪದ್ಯಗಳು. ಉದಯರಾಗಗಳನ್ನು ರಚಿಸಿದ್ದಾರೆ.‌ ಶ್ರೀ ರಾಮಾಷ್ಟಕ,ಶ್ರೀ ದತ್ತಾಷ್ಟಕ, ಶ್ರೀ ಗೋವಿಂದಾಷ್ಟಕ, ಶ್ರೀ ವೆಂಕಟೇಶಾಷ್ಟಕ, ಶ್ರೀಶಿವಾಷ್ಟಕ,
ಶ್ರೀ ಸಂತಾಷ್ಟಕ, ಶ್ರೀ ಗುರು ಅಷ್ಟಕ,
ಬೋಧಾಷ್ಟಕ,ಮಂಗಳಾಷ್ಟಕ ಇತ್ಯಾದಿ ಅಷ್ಟಕಗಳು ರಚಿಸಿದ್ದಾರೆ.

ಕೃಷ್ಣರಾಯರ ಅಂಕಿತಗಳು:-
ಮಹಿಪತಿನಂದನ,ಮಹಿಪತಿ ಕಂದ,
ಮಹಿಪತಿಸುತ,ಮಹಿಪತಿಸುತ ಪ್ರಭು,
ಸುಮಾರು ೨೪ ವಿಧವಿಧ ಅಂಕಿತಗಳಿವೆ.
ಹರಿದಾಸ ಸಾಹಿತ್ಯ ಪ್ರಪಂಚದಲ್ಲಿ ವಿಶಿಷ್ಟವಾದ ಕೊಡುಗೆ ಮತ್ತು ಸೇವೆ ಸಲ್ಲಿಸಿದ್ದಾರೆ.

ಜೀವನದಲ್ಲಿ ನಡೆದ ಪ್ರಸಂಗಗಳು:

ಕೃಷ್ಣರಾಯರು ತಮ್ಮ ಹೆಚ್ಚಿನ ವೇಳೆಯನ್ನು ತಮ್ಮ ತಂದೆಯಿಂದ ಬಂದಿದ್ದ, ಅವರು ಪೂಜಿಸಿದ ಸಾಲಿಗ್ರಾಮ, ವೇಣುಗೋಪಾಲಮೂರ್ತಿ, ವರಾಹದೇವರು, ಪೂಜೆ ಮಾಡುತ್ತ ಜಪತಪ, ಅನುಷ್ಠಾನ ಹರಿನಾಮಸ್ಮರಣೆಯಲ್ಲಿ ಕಾಲ ಕಳೆಯುತ್ತಿದ್ದರು. ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆಮಾಡುತ್ತ, ದೇವರ ಪೂಜೆಯ ಜೊತೆ ತಂದೆಯ ಪಾದುಕೆಯನ್ನು ಪೂಜೆ ಮಾಡಿ ) ನೈವೇದ್ಯ ಮಾಡಿ ನಂತರ ಅನ್ನ ಉದಕ ಸೇವಿಸುತ್ತಿದ್ದರು.

ತಂದೆ ಮಹಿಪತಿದಾಸರ ಅಗಲುವಿಕೆಯ ದುಖ ಇನ್ನು ಮಾಸಿದ್ದಿಲ್ಲ. ಆಗ ಜಪತಪ ಮಾಡುತ್ತಿದ್ದ ಸ್ಥಳದಲ್ಲಿ ದ್ವಾದಶ ಕ್ಷೇತ್ರಗಳ ಸಾಲಿಗ್ರಾಮಗಳು ದೊರೆತವು ವೃಂದಾವನ ಸ್ಥಾಪಿಸು ಅಲ್ಲಿ ನಾನು ಬಂದು ನೆಲೆಸುವೆ , ನೀನು ಪೂಜೆ ಪ್ರಾರಂಭಿಸು, ಸದಾ ನಿನ್ನ ಜೊತೆ ಇರುವೆ ಎಂದು ಹೇಳಿದಂತೆ  ಸ್ವಪ್ನ ಕಂಡರು. ಅದರಂತೆ ಕಾರ್ಯ ಪ್ರಾರಂಭಿಸಿದಾಗ ಸಾಲಿಗ್ರಾಮ ದೊರೆತವು. ಯಥಾ ವಿಧಿಯಾಗಿ ವೃಂದಾವನ  ಕಟ್ಟಿಸಿ  ಪೂಜೆ, ಆರಾಧನೆ ಪ್ರಾರಂಭಿಸಿದರು.

ಹೀಗೆ ನಡೆದ ಒಂದು ಪ್ರಸಂಗವೆಂದರೆ ಕೃಷ್ಣದಾಸರು ತೀರ್ಥಯಾತ್ರಾರ್ಥಿಯಾಗಿ
ಹೋರಟಾಗ  ಸತ್ತಿ ಗ್ರಾಮದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ತಟದಲ್ಲಿ ಅಂದು ಏಕಾದಶಿ ಇತ್ತು. ತಮ್ಮ ನೈಮಿತ್ತಿಕ ಕರ್ಮಸ್ನಾನ ಸಂಧ್ಯಾವಂದನೆ ಪೂಜೆಜಪತಪ  ಮಾಡಿ , ಮಹಿಪತಿರಾಯರ ಪಾದುಕಾ ಪೂಜೆ ಮಾಡುತ್ತಿದ್ದರು.

ಅದೇ ವೇಳೆಗೆ ಸತ್ತಿ ಗ್ರಾಮಕ್ಕೆ ಸಂಚಾರದಲ್ಲಿದ್ದ  ಉತ್ತರಾಧಿ ಮಠದ ಶ್ರೀ ಸತ್ಯಪೂರ್ಣ ತೀರ್ಥ ಮಹಾಸ್ವಾಮಿಗಳು ಬೀಡಾರ ಹೂಡಿದ್ದರು. ಅವರ ಶಿಷ್ಯಂದಿರು , ಅವರ‌ ಪೂಜೆಗೆ ನೀರು ತರಲು ಬಂದಿದ್ದರು. ಆದರೆ ನದಿಯ ದಡದಲ್ಲಿತೇಜಪುಂಜನಾದ ಮದ್ಯ ವಯಸ್ಕರಾದ ಕೃಷ್ಣದಾಸರು ಪಾದುಕಾ ಪೂಜೆ ಮಾಡಿ , ಧ್ಯಾನಾಸಕ್ತರಾಗಿ ಕುಳಿತ್ತಿದ್ದು ನೋಡಿ ವಿಚಿತ್ರವೆನಿಸಿತು.

ಆ ಶಿಷ್ಯಂದಿರು ಕೂಗಿ ಕೃಷ್ಣದಾಸರನ್ನು
ಧ್ಯಾನದಿಂದೆಚ್ಚರಗೊಳಿಸದರು. ಅವರು ವಿಚಾರಿಸಲಾಗಿ; ಕೃಷ್ಣದಾಸರು ಯಾತ್ರಾರ್ಥಿಯಾಗಿ ಹೋರಟಿರುವುದಾಗಿ ಮತ್ತು ದೇವರ ಪೂಜೆ ಮತ್ತು  ತಂದೆಹಿಪತಿರಾಯರ ಪಾದುಕ ಪೂಜೆ ಮಾಡಿರುವುದಾಗಿ ಹೇಳಿದರು. ಇದೆಲ್ಲವು ಅವರಿಗೆ ಸೋಜಿಗವೆನಿಸಿತು. ಅವರು ತಮ್ಮ ಬಂದ ಕೆಲಸ ಮುಗಿಸಿ ತಮ್ಮ
ಸ್ವಾಮಿಗಳ‌ ಹತ್ತಿರ ಹೋದರು.
ಅಲ್ಲಿ ಶ್ರೀ ಸತ್ಯಪೂರ್ಣ ತೀರ್ಥ ಸ್ವಾಮಿಗಳ ಹತ್ತಿರ ಬ್ರಾಹ್ಮಣನಾದ ಕೃಷ್ಣದಾಸರು ತಮ್ಮ ತಂದೆಯ ಪಾದುಕೆ ಪೂಜೆ ಮಾಡಿರುವುದು
ಮತ್ತು ಎಲ್ಲ ನಡೆದ ಘಟನೆಗಳ  ಬಗ್ಗೆ ಹೇಳಿದರು.

ಆಗ ಸ್ವಾಮಿಗಳು ಮತ್ತೊಬ್ಬ ಶಿಷ್ಯನನ್ನು  ಕರೆದು , ಸ್ವಾಮಿಗಳು ಹೇಳಿ ಕಳಿಸಿದ್ದಾರೆ; ಇಗಲೇ ಬರಬಕೆಂದು ಹೇಳಿ ಕೃಷ್ಣದಾಸರನ್ನು
ಜೊತೆಯಲ್ಲಿಯೇ ಕರೆದುಕೊಂಡು ಬನ್ನಿ ಅಂತ ಹೇಳಿ ಕಳಿಸಿದರು.

ಇತ್ತ ಶಿಷ್ಯರು ಧ್ಯಾನಾಸಕ್ತರಾಗಿದ್ದ ಕೃಷ್ಣ ದಾಸರನ್ನು ಕೂಗಿ ಎಚ್ಚರಿಸಿ , ಸ್ವಾಮಿಗಳು; ತಮ್ಮನ್ನು' ನಮ್ಮ ಜೊತೆ ಕರೆತರಲು  ಹೇಳಿರುವರು ಎಂದರು.
ಕೃಷ್ಣದಾಸರು ತಮ್ಮ ಪೂಜಾ ಪೆಟ್ಟಿಗೆ ಮತ್ತು ಪಾದುಕೆಗಳ ಜೊತೆ ಸ್ವಾಮಿಗಳ ಭೇಟಿಯಾಗಲು ಹೋರಟರು.

ಬಿಡಾರದಲ್ಲಿ ಹೋಗಿ ಸ್ವಾಮಿಗಳನ್ನು ವಿನಿತದಿಂದ ಭೇಟಿಯಾಗಿ ಧೀರ್ಘ ದಂಡ ನಮಸ್ಕಾರವನ್ನು‌ ಮಾಡಿದರು.ಸ್ವಾಮಿಗಳು ಇವರನ್ನು ನೋಡಿ , ನೀನು ಬ್ರಾಹ್ಮಣನಾಗಿ ಶಾಲಿಗ್ರಾಮ ಪೂಜೆ ಬಿಟ್ಟು, ಮನುಷ್ಯರ ಪಾದುಕೆ ಮಾಡುವುದೇ ಎಂದು ಕೇಳಿದರು. ಆಗ ಕೃಷ್ಣದಾಸರು ಸ್ವಲ್ಪವು ವಿಚಿಲಿತವಾಗದೇ "ನಮ್ಮ ತಂದೆ ಮಹಿಪತಿದಾಸರು ಅವರು ಅಪರೋಕ್ಷ ಜ್ಞಾನಿಗಳು" ಅವರು ಪೂಜಿಸಿದ ಶಾಲಿಗ್ರಾಮ , ವೇಣುಗೋಪಾಲ,ವೇಂಕಟೇಶ ಮೂರ್ತಿ, ಹೀಗೆ ಅವರು ಕೊಟ್ಟ ಎಲ್ಲ ದೇವರನ್ನು ಪೂಜಿಸಿ ನಂತರ ನನ್ನ ಸ್ವರೂಪೋದ್ಧಾರಕರಾದ ನಮ್ಮ ತಂದೆಯವರ ಪಾದುಕಾ ಪೂಜೆ ಮಾಡುವೆ ಅಂದರು.ಇವರ ಮಾತಿಗೆ ನೀನು ಬಹಳ ಚುರುಕಾಗಿದ್ದಿಯಾ ;  ಏಕಾದಶಿ ನಿಮಿತ್ಯ , ಇಂದು ರಾತ್ರಿ ೯ ಗಂಟೆಗೆ ಬಂದು ಮೂಲ ರಾಮದೇವರ ಮುಂದೆ "ಗಜೇಂದ್ರ ಮೋಕ್ಷ"ದ  ಕಥೆ ಹೇಳಬೇಕು ಎಂದು ಆಜ್ಞೆ ಮಾಡಿದರು. ಕೃಷ್ಣದಾಸರು  ಹರಿಇಚ್ಛೆ ಎಂದು ಒಪ್ಪಿಕೊಂಡರು.

ಏಕಾಂತ ಬಯಸಿ , ಧ್ಯಾನಾಸಕ್ತರಾಗಿ
ಕುಳಿತಿರಲು , ಮಗು! ಕೃಷ್ಣರಾಯ  ಧೈರ್ಯದಿಂದ ಗಜೇಂದ್ರಮೋಕ್ಷದ ಕಥೆ ಹೇಳು, ಭಗವಂತ ಅನುಗ್ರಹಿಸುತ್ತಾನೆ. ಎಂದು ಮಹಿಪತಿದಾಸರ ವಾಣಿ ಕಿವಿಗೆ ಉಸಿರಿದಂತಾಯಿತು. ಕಣ್ತೆರೆದು ಮನದಲ್ಲಿ ಸ್ವಾನಂದ ಹೊಂದಿದರು.

ಅಂದು ಸಾಯಂಕಾಲ ಸ್ವಾಮಿಗಳು
ಮುಂದೆ ಮೂಲಸೀತಾರಾಮರಿಗೆ ನಮಸ್ಕರಿಸುತ್ತಾ, ಸ್ವಾಮಿಗಳಿಗೆ ನಮಸ್ಕರಿಸಿ,  ಮೊದಲು ಮಂಗಳಾಚರಣೆಯನ್ನು ಹಾಡಿದರು.
" ಓಂ ನಮೋ ಸಕಲ ಮಂಗಳದಾಯಕ/
ಘನ್ನ ಮಹಿಮೆ ಶ್ರೀ ಗಣನಾಯಕ/
ನಿನ್ನ ಕೀರ್ತನೆಯ ಪಾಡುವ ಭಕ್ತರಾ/
ಇನ್ನು ಮಾಡೋ ನಿರ್ವಿಘ್ನದಿ ಮುಕ್ತರಾ/........ ಅನ್ನುವ ನುಡಿಯನ್ನು ಹಾಡಿದರು. ಇದರಲ್ಲಿ ಎಲ್ಲ ತಾರತಮ್ಯೊಕ್ತ ದೇವರನ್ನು ಸ್ಮರಣೆ ಮಾಡಿದರು.

ಹೀಗೆ  ಇಪ್ಪತ್ತೇಂಟು ನುಡಿವುಳ್ಳ ಗಜೇಂದ್ರ ಮೋಕ್ಷದ ಕೀರ್ತನೆಯನ್ನು ಹೃದಯಂಗಮವಾಗಿ ಹೇಳುತ್ತಿರುವಾಗ ; ಸ್ವಾಮಿಗಳ ಶಿಷ್ಯಂದಿರು ಬಂದು.., ಸಾಧನಿ ದ್ವಾದಶಿ ಸೂರ್ಯೋದಯದ ಒಳಗೆ ಪಾರಣಿ ಮುಗಿಯಬೇಕು ಎಂದು ಹೇಳಿದರು .ಆಗ ಸ್ವಾಮಿಗಳು'ನಿಮಗೆ ಕೇವಲ ಪಾರಣೆ ಚಿಂತೆಯಾಗಿದೆ. ಕೊನೆಗೆ ಗಜೇಂದ್ರ ಮೋಕ್ಷವಾಗಬೇಕಾಗಿದೆ. ಇನ್ನು ಸ್ವಲ್ಪೇ ವೇಳೆಗೆ ಮುಗಿಯುವುದು ; ನೀವು ಸುಮ್ಮನೆ ಕೂಡಿ ಎಂದು ಹೇಳಿ ಕಳುಹಿಸಿದರು.

ಕೃಷ್ಣರಾಯರು ಕೀರ್ತನೆ ಹೇಳುತ್ತಿರುವಾಗ; ಕೃಷ್ಣರಾಯರಿಗೆ ಮತ್ತು ಶ್ರೀ ಸತ್ಯಪೂರ್ಣ ತೀರ್ಥರಿಗೆ ಮಾತ್ರ ಕೀರ್ತನೆಯಲ್ಲಿನ ಪ್ರತಿ ವಿಷಯದ ಪ್ರಸಂಗ  ಪ್ರತ್ಯಕ್ಷವಾಗಿ ಕಾಣುಸ್ತಿತಂತೆ .

ಹೀಗೆ ರಾಗ ಲಯ ಸುಂದರ ನಿರೂಪಣೆಯ ಮೂಲಕ ಮನ ಗೆದ್ದರು. ಕೂಡಲೇ ಸ್ವಾಮಿಗಳು ಎದ್ದು ಬಂದು ಕೃಷ್ಣರಾಯರನ್ನು ಅಪ್ಪಿಕೊಂಡು ಸನ್ಮಾನಿಸದರು.
ನೆರೆದ ಸಭಿಕರು ರಾಮದೇವರ ಪೂಜೆ ಮಾಡಿದ ನಂತರ ಪಾರಣಿ ಮಾಡಿಸಿ; ಶಾಲು ವಸ್ತ್ರಾದಿಗಳ ಜೊತೆ ಫಲಮಂತ್ರಾಕ್ಷತೆ ಕೊಟ್ಟು ಬಿಳ್ಕೊಟ್ಟರು. ಅಂದಿನಿಂದ ಈ ಮನೆತನಕ್ಕೆ "ಅಯ್ಯ" ನವರು ಎಂದು ಪ್ರಸಿದ್ಧವಾಯಿತು. ಹೀಗಾಗಿ ಈ ಮನೆತನದಲ್ಲಿ ತಮ್ಮ ತಮ್ಮ ಹೆಸರಿನ ಮುಂದೆ "ಅಯ್ಯ" ಸೇರಿಸಿರುವುದು ವಿಶೇಷ.

✍️ ಪ್ರಿಯಾ ಪ್ರಾಣೇಶ ಹರಿದಾಸ









.

Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ