ಲೇಖನ :- ವಿಶ್ವ ಕಂಡ ವಿಶ್ವಮಾನವ ಸಂತ ಅನುಭಾವಿ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ
ಲೇಖನ :- ವಿಶ್ವಮಾನವ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮಿಗಳು
✍️ ಪ್ರಿಯಾ ಪ್ರಾಣೇಶ ಹರಿದಾಸ
(ವಿಜಯಪುರ )
ನಮಸ್ಕಾರ ಸ್ನೇಹಿತರೇ, ಜನೆವರಿ ೨ ನಮ್ಮ ವಿಜಯಪುರದ ನಡೆದಾಡುವ ದೇವರೆಂದೆ ಸಿದ್ದಿ ಪ್ರಸಿದ್ದಿ ಪಡೆದ ಶ್ರೀ ಸಿದ್ದೇಶ್ವರ ಸ್ವಾಮಿಗಳು ತಮ್ಮ ಭೌತಿಕ ಶರೀರ ಬಿಟ್ಟ ದಿನ. ಆ ನಿಮಿತ್ತ ಅವರಿಗೊಂದು ನುಡಿ ನಮನಗಳು, ಅವರ ಕುರಿತಾದ ಚಿಕ್ಕ ಮಾಹಿತಿ.
ಮೊದಲು ಸಂಸಾರ ಜೀವನ ಮತ್ತು ಸಮಾಜ ತಿಳಿಯೋಣ....
ಜೀವನ ಎಂದರೆ ಮನುಷ್ಯನಿಗೆ ಭಗವಂತ ವಿಶಿಷ್ಟ ರೀತಿಯ ವಿವೇಚನೆ ಶಕ್ತಿ, ಅರಿವು, ಚಿಂತನೆ ಕೊಟ್ಟಿದ್ದಾನೆ. ಹೀಗಾಗಿಯೇ "ಮಾನವ ಜನ್ಮo ದುರ್ಲಭಂ" ಎಂಬಂತೆ ಎಲ್ಲ ಪ್ರಾಣಿಗಳಲ್ಲಿ ಮನುಷ್ಯ ಶ್ರೇಷ್ಠನೆನಿಸಿದ್ದಾನೆ.
ಮನುಜನು ಸಂಸಾರ ಬಂಧನದಲ್ಲಿದ್ದು ಐಹಿಕ ಭೋಗಗಳನ್ನು ಮಾಡುತ್ತಾ ಇಂದ್ರೀಯ ನಿಗ್ರಹವಿಲ್ಲದೆ ಸುಖ ಸುಪ್ಪತ್ತಿಗೆಯಲ್ಲಿ ತೇಲುತ್ತಾ ಇರುತ್ತಾನೆ. ಇನ್ನು ಬಡವರು ದಿನದ ದುಡಿಮೆಯಲ್ಲಿ ಜೀವನ ಕಳೆಯುತ್ತಾರೆ. ಜೀವನದಲ್ಲಿ ಬಡವ ಶ್ರೀಮಂತ ಇರುತ್ತಾರೆ. ಕೆಲವರು ಬಡತನದಲ್ಲಿ ಕಷ್ಟ ಪಟ್ಟು ಮುಂದೆ ಯಶಸ್ಬಿಯಾಗಿ ಶ್ರೀಮಂತರಾಗುತ್ತಾರೆ. ಇನ್ನು ಕೆಲವರು ಶ್ರೀಮಂತಿಕೆ, ಕೀರ್ತಿ, ಹಣ ಹೀಗೆ ಬೆನ್ನು ಹತ್ತುತ್ತಾರೆ. ಕಂಡ ಕನಸು ನನಸಾಗದೇ ಇದ್ದಾಗ ಹತಾಶಯಕ್ಕೆ ಒಳಗಾಗಿ ಜೀವನ ಕಳೆದುಕೊಳ್ಳುತ್ತಾರೆ.
ಎಲ್ಲವೂ ಪರಿಪೂರ್ಣತೆಯಿಂದ ಇದ್ದವರಲ್ಲಿ ಅಹಂಕಾರ ಮನೆ ಮಾಡಿರುತ್ತದೆ. ಇನ್ನು ಕೆಲವರು ಒಳ್ಳೆಯವರು ಇರುತ್ತಾರೆ, ಬಂದದರಲ್ಲಿಯೇ ತೃಪ್ತಿಯಿಂದ ಜೀವನ ಸಾಗಿಸುತ್ತಾರೆ. ಒಟ್ಟಾರೆ
ಮೇಲಿನ ಪೀಠಿಕೆಯಲ್ಲಿ ಸಂಸಾರವೆಂದರೆ ಎಲ್ಲ ಸ್ತರದ ಜನರ ಇರುವುದು ಖಚಿತವಾಯಿತು. ಇನ್ನು ಇಲ್ಲಿ ಒಳ್ಳಯದು ಕೆಟ್ಟದ್ದು, ಸುಖ ದುಃಖ, ಲಾಭನಷ್ಟ, ಜಯಾಪಜಯ ಹೀಗೆ ಜೀವನದಲ್ಲಿ ಅನುಭವಗಳಾಗುತ್ತಾದೆ.
ಇವೆಲ್ಲಕೂಡಿ ಇರುವುದೇ ಸಮಾಜ, ಜನರೆಂದರೆ ಸಮಾಜ, ಸಮಾಜವೆಂದರೆ ಜನರು. ಇಂತಹ ಸಮಾಜಕ್ಕೆ ಜ್ಞಾನಿಗಳು, ಸಾಧು ಸಂತರು ದಾಸರು ಶರಣರು,ಗುರುಗಳು, ಹಿರಿಯರು ಸಜ್ಜನರ ಹಿತೋಪದೇಶಗಳು, ಅವರ ನುಡಿಮಾತುಗಳು ಸಂಸ್ಕಾರ ಸಂಸ್ಕೃತಿ ನೈತಿಕತೆಯತ್ತ ನಡೆಯಲು ಸಮಾಜಕ್ಕೆ ಬಹಳ ಅತ್ಯಾವಶ್ಯಕವಾಗಿದೆ.
ಸಾಧು,ಸಂತರು, ಜ್ಞಾನಿಗಳು,ದಾಸರು, ಶರಣರು ಇವರು ಜಲದಲ್ಲಿನ ಕಮಲದಂತೆ ಇರುತ್ತಾರೆ.
ಭಗವದ್ಗೀತೆಯ ೪ ನೇ ಅಧ್ಯಾಯದ,ಶ್ಲೋಕ - ೨೦
ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ[S]ನಿರಾಶ್ರಯಃ ।
ಕರ್ಮಣ್ಯಭಿಪ್ರವೃತ್ತೋSಪಿ ನೈವ ಕಿಂಚಿತ್ ಕರೋತಿ ಸಃ ॥೨೦॥
ಮನುಷ್ಯನಿಗೆ ಇರುವ ಎಲ್ಲ ಮೋಹ ಕಾರ್ಯಗಳ
ಫಲಾಫಲ ತ್ಯಜಿಸಿ ಸದಾ ತೃಪ್ತನಾಗಿ ಸ್ವತಂತ್ರನ್ನಾಗಿರುತ್ತಾನೆ. ಫಲಾಪೇಕ್ಷೆ ಪಟ್ಟು ಯಾವ ಕರ್ಮವು ಮಾಡುವುದಿಲ್ಲ. ಸದಾ ಭಗವಂತನ ನಾಮಜಪದಲ್ಲಿ ಲೀನರಾಗಿರುತ್ತಾರೆ.
ಇಂತಹವರ ಸಾಲಿನಲ್ಲಿ ಬರುವರು ನಮ್ಮ ವಿಜಯಪುರದ ನಡೆದಾಡುವ ದೇವರೆಂದು
ಭಕ್ತ ಮಾನಸದಲ್ಲಿ ನೆಲೆಯೂರಿದ ಅಪ್ಪಾಜಿ ಎಂದೇ ಹೆಸರುವಾಸಿಗಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳು.
ಒಬ್ಬ ಶ್ರೇಷ್ಠರು ಎಸಬೇಕಾದಾರೆ ಅದೊಂದು ಪೂರ್ವ ಜನ್ಮದ ಸುಕೃತ ಫಲ.
ಅಪ್ಪಾಜಿ ಅವರು ವಿಜಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 21
(ದೀಪಾವಳಿ ಪಾಡ್ಯ )ರಂದು ಜನಿಸಿದರು . ಇವರ ಹೆಸರು ಸಿದ್ದಗೊಂಡಪ್ಪ.ಇವರ ತಂದೆ ಹೆಸರು ಓಗೆಪ್ಪಾ ಪಾಟೀಲ , ತಾಯಿ ಹೆಸರು ಸಂಗಮ್ಮ. ಇವರಿಗೆ ಮೂರು ಜನ ಗಂಡುಮಕ್ಕಳು, ಮೂರು ಜನ ತಂಗಿಯರು. ಗಂಡು ಮಕ್ಕಳಾದ ಮೊದಲನೆಯವರು ೧)ಸಿದ್ದಗೊಂಡಪ್ಪ (ಸಿದ್ದೇಶ್ವರ ಅಪ್ಪಾಜಿ)೨)ಸೋಮಲಿಂಗಪ್ಪ ೩)ಅಮರೇಶಪ್ಪ
ಇನ್ನು ಸಹೋದರಿಯರ ಹೆಸರು ೧)ಸುಮಿತ್ರಾ, ಬಾಳವ್ವ, ಲಕ್ಷ್ಮಿ ಬಾಯಿ.
ಇವರ ತಂದೆ ಓಗೆಪ್ಪಾ ಪ್ರಸಿದ್ಧ ಚಿತ್ರಕಾರರು, ಇವರು ಸೊಲ್ಲಾಪುರದಲ್ಲಿ ಚಿತ್ರ ಬರೆಯುತ್ತಿದ್ದರು. ಇವರು ಬಿಡಿಸಿದ ಚಿತ್ರ ಬಿಜ್ಜರಗಿ ಅಲ್ಲದೇ ಸೊಲ್ಲಾಪುರ ಮತ್ತು ಇತರ ಊರುಗಳಲ್ಲಿ ಪ್ರಸಿದ್ದಿ ಪಡೆದಿದ್ದವು.
ತಂದೆ ಓಗೆಪ್ಪಾ ಅವರು ಸೊಲ್ಲಾಪುರದಲ್ಲಿದ್ದರೆ.., ತಾಯಿ ಸಂಗಮ್ಮ ಬಿಜ್ಜರಗಿಯಲ್ಲಿ ೬ ಮಕ್ಕಳ ಸಂಸಾರ ಭಾರ ಹೊತ್ತಿದ್ದರು. ಮುಂದೆ ಸಂಗಮ್ಮನ ತಾಯಿ ತೀರಿದ್ದರಿಂದ ಇವರ ತಂದೆ ನಾಗಪ್ಪಜ್ಜ ೧೯೩೫ ರಲ್ಲಿ ಇವರಲ್ಲಿಯೇ ಇದ್ದರು. ನಾಗಪ್ಪಜ್ಜ ಇವರು ಭವಿಷ್ಯ ಹೇಳುವುದು, ಹೇಳಿಕೆ ಹೇಳುವುದು ಮಾಡುತ್ತಿದ್ದರು.
ಮುಂದೆ ಮೊಮ್ಮಗ ಸಿದ್ದಗೊಂಡ ಮಗು ಹುಟ್ಟಿದ ಮೇಲೆ ನಾಗಪ್ಪಜ್ಜ ಅವರು ನೋಡಿದ ಕ್ಷಣದಲ್ಲೇ ಹೇಳಿದ್ದರಂತೆ ಇವನೊಬ್ಬ ಜಗ ಮೆಚ್ಚುವ ಮಗನಾಗುವನು ಎಂದಿದ್ದರು. ನಾಗಪ್ಪಜ್ಜ ಇಚ್ಚಾಮರಣಿಯಾಗಿಯೇ ದೇಹ ಬಿಟ್ಟರು.
ಸಿದ್ದಗೊಂಡರು ಬಾಲ್ಯದಲ್ಲಿ ಎಲ್ಲ ಮಕ್ಕಳಂತೆ ಇರದೆ, ಮೃದು ನಗುಮುಖದ ಬಾಲಕ. ಚಿಕ್ಕವರಿದ್ದಾಗಲೂ ಸದಾ ಬಿಳಿ ವಸ್ತ್ರ ತೊಡುತ್ತಿದ್ದರಂತೆ. ಊರ ಹೊರಗಿನ ೧ ಕೀ. ಮಿ ದೂರದಲ್ಲಿರುವ ಅಣ್ಣಪ್ಪ ಲೋಣಿ ಅವರು ಕಟ್ಟಿಸಿದ ರಾಮೇಶ್ವರ್ ಗುಡಿಗೆ ಅದಕ್ಕೆ ಹೊಂದಿ ಇರುವ ಸನ್ಯಾಸಪ್ಪನ ಮಠದಲ್ಲಿ(ಇಲ್ಲಿ ಒಬ್ಬ ಸನ್ಯಾಸಿಗಳು ಜೀವಂತ ಸಮಾಧಿಯಾಗಿದ್ದಾರೆ. ಹೀಗಾಗಿ ಸನ್ಯಾಸಪ್ಪನ ಮಠ ಎಂದೇ ಊರಿನ ಜನ ಕರೆಯುತ್ತಾರೆ.) ಜಪ ಯೋಗಗಳನ್ನು ಮಾಡುತ್ತಿದ್ದರು. ಇವರು ಏಕಾಂತಪ್ರಿಯರು, ಪುಸ್ತಕ ಓದುವುದು ಹೀಗೆ ಸಾಧನ ಶರೀರದಿಂದ ಸಾಧನೆ ಮಾಡುತ್ತಿದ್ದರು.
ಇವರ ಪ್ರಾರ್ಥಮಿಕ ಶಾಲೆ ೧ ರಿಂದ ೭ ತರಗತಿ ವರೆಗೆ ಬಿಜ್ಜರಗಿಯಲ್ಲಿಯೇ ಕಲಿತರು ನಂತರ
ಒಂದು ದಿನ ಶ್ರೀ ಮಲ್ಲಪ್ಪ ಅಕ್ಕಿಯವರ ಮನೆಯಲ್ಲಿ ಶ್ರೀಬ್ರಹ್ಮಾನಂದ ಶ್ರೀಗಳ ಪ್ರವಚನ ನಡೆಯುತ್ತಿತ್ತು ಅವರ ಪ್ರವಚನ ಕೇಳಿ ಪ್ರಭಾವಿತರಾದರು. ಮುಂದೆ ಮೂಲ್ಕಿ ಪರೀಕ್ಷೆಗೆ ೧೯೫೩ ರಲ್ಲಿ ಬರೆಯಲು ಗೆಳೆಯರೊಂದಿಗೆ ವಿಜಯಪುರಕ್ಕೆ ಬಂದರು ಆ ವೇಳೆ ಮಲ್ಲಿಕಾರ್ಜುನ ಶ್ರೀಗಳ ಪ್ರವಚನ ಕೇಳಲು ಎಲ್ಲರೂ ಹೋಗುತ್ತಿದ್ದರು. ಆಗ ಶ್ರೀಗಳು ವಿಜಯ ಕಾಲೇಜನಲ್ಲಿ ವಾಸ್ತವ್ಯ ಹೂಡಿದ್ದರು. ಶ್ರೀಗಳ ಮುಂದೆ ಸಿದ್ದಗೊಂಡರು ಹೋಗಿ ನಿಲ್ಲುತ್ತಿದ್ದರು, ಪ್ರವಚನದಲ್ಲಿ ಕಂಡ ಹುಡುಗ ನಿಲ್ಲುವುದನ್ನು ನೋಡಿ ಕರೆದು ವಿಚಾರಿಸಿದಾಗ ಅಧ್ಯಾತ್ಮದ ಹಸಿವು ತಿಳಿದುಕೊಂಡರು.ಆಗ ಅವರು ಈ ಬಾಲಕ ವಿಶಿಷ್ಟ ಸಮಾಜ ಕಲ್ಯಾಣಕ್ಕೆ ಹುಟ್ಟಿರುವನೆಂದು ಅರಿತು ತಂದೆ ತಾಯಿಯ ಒಪ್ಪಿಗೆ ಪಡೆದು ತಮ್ಮ ಜೊತೆ ಕರೆದುಕೊಂಡು ಬಂದರು. ಮರಳಿ ತಂದೆತಾಯಿ ಕರೆಯಲು ಬಂದರೆ ನೀವು ಕರೆದುಕೊಂಡು ಹೋದರೆ ನಾ' ಎಲ್ಲಿಗಾದರೂ.. "" ಹೋಗುವೆ ಎಂದು ಹೇಳುತ್ತಿದ್ದನು ಎಂದು ಅವರ ಬಾಲ್ಯ ಸ್ನೇಹಿತರಾದ ಶ್ರೀ ಬಿಎಸ್ ಪಟ್ಟಣ ಅವರು ಹೇಳಿದರು. ಹಾಗೇ ಇವರು ಇನ್ನೊಂದು ವಿಷಯ ಹೇಳಿದರು ಮಲ್ಲಿಕಾರ್ಜುನ ಶ್ರೀಗಳು ಸಿದ್ದೇಶ್ವರರನ್ನು ಚಡಚಣದಲ್ಲಿ ಓದಲು ಇಟ್ಟಿದ್ದರು. ಒಮ್ಮೆ ಸಿದ್ದೇಶ್ವರರು ಚಡಚಣದಿಂದ ಗುಡ್ಡಾಪುರಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಆಗ ಬಿಜ್ಜರಿಗಿ ಗೆ ಬಂದರು ಎಲ್ಲ ಸ್ನೇಹಿತರನ್ನು ಕರೆದುಕೊಂಡು
ಊರ ಹೊರಗೆ ಇರುವ ಸನ್ಯಾಸಿ ಮಠಕ್ಕೆ ಕರೆದೊಯ್ದರು. ನಾಲ್ಕೈದು ದಿನ ಅಲ್ಲೇ ಇದ್ದರು..
ಆ ವೇಳೆಯಲ್ಲಿ ಸಿದ್ದೇಶ್ವರರು ಗುಡಿಯ ಬಾಗಿಲಿಗೆ ಕಲ್ಲು ಇಟ್ಟುಕೊಂಡು ಧ್ಯಾನ ಮಾಡುತ್ತಾ ಮೂರು ದಿನ ಅಲ್ಲೇ ಕಳೆದಿದ್ದರು. ಆಗ ಮಲ್ಲಿಕಾರ್ಜುನ ಶ್ರೀಗಳಿಗೆ ವಿಷಯ ತಿಳಿದು ಶಿಷ್ಯಂದಿರು ಬಂದು ಅವರನ್ನು ಕರೆದುಕೊಂಡು ಹೋದರು ಎಂದು ಎರಡನೆಯ ಘಟನೆ ಹೇಳಿದರು.
1954ರಲ್ಲಿ ಯುಗಾದಿ ಪಾಡ್ಯ ದಿನದಂದು ಶ್ರೀ ಸಿದ್ದೇಶ್ವರ ಶ್ರೀಗಳು ಬಿಜ್ಜರಗಿ ಗ್ರಾಮವನ್ನು ತೊರೆದರು. ಮತ್ತೆ 40 ವರ್ಷದ ನಂತರ 1994ರಲ್ಲಿ
ಬಂದಿದ್ದರು ಎಂದು ಬಿಜ್ಜರಗಿ ಗ್ರಾಮದ ಶ್ರೀ ರಾಜು ಮಸಳಿ ಅವರು ಹೇಳಿದರು..
ಅಂದಿನಿಂದ ಅವರು ಶ್ರೀ ಮಲ್ಲಿಕಾರ್ಜುನ ಶ್ರೀಗಳ ಮೆಚ್ಚಿನ ಅಂತರಂಗದ ಶಿಷ್ಯರಾದರು .
ಬಾಲಕ ಸಿದ್ದಗೊಂಡರ ಏಕಾಗ್ರ ಚಿತ್ತತೆಯನ್ನು ಕಂಡು ಮಲ್ಲಿಕಾರ್ಜುನ ಸ್ವಾಮಿಗಳ ತಾವು ಪ್ರವಚನ ಮಾಡುವಲ್ಲಿ ಸಿದ್ಧಗೊಂಡನನ್ನು ಕರೆದುಕೊಂಡು ಹೋಗುತ್ತಿದ್ದರು. ಮುಂದೆ ಇವರು ಸಿದ್ದೇಶ್ವರ ಎಂದು ಕರೆಯ ತೊಡಗಿದರು. ಹಾಗೇ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು.ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸಾದರು.
ಕನ್ನಡ, ಸಂಸ್ಕೃತ,ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತರು.ಇವರಲ್ಲಿ ಅಧ್ಯಾತ್ಮದ ಆಳವಾದ ಚಿಂತನೆ ಇತ್ತು. ಶ್ರೀಗಳಲ್ಲಿ ಹೊಸದನ್ನು ಕಲಿಯಬೇಕು, ಹಿಂದೂ ಧರ್ಮ, ವೈದಿಕ ಶಾಸ್ತ್ರ, ಉಪನಿಷತ್ ಸಾರ, ಗೀತಾ ವಿಶ್ಲೇಷಣೆ, ವಚನಗಳಲ್ಲಿ ಭಕ್ತಿಯ ವರ್ಣನೆ ಈ ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು.
ಕೊಲ್ಹಾಪುರದ ಶ್ರೀ ವಿಜಯ ಪಾಟೀಲರ ಮನೆಯಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಟ್ಟುಗೂಡಿಸಿ "ಸಿದ್ದಾಂತ ಶಿಖಾಮಣಿ "ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು.
ಆಗ ಅವರಿಗೆ ಕೇವಲ ೧೯ ವಯಸ್ಸು ಇತ್ತು.
ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಕುರಿತಾದ ಶ್ರೀ ಸ್ವಾಮಿಜಿಯವರ ಉಪನ್ಯಾಸಗಳು ಅವುಗಳ ಮೂಲಕ ಚಿಂತನೆಗಾಗಿ ಹೆಸರುವಾಸಿಯಾಗಿದ್ದರು. ಇವರು ಹಲವಾರು ಪುಸ್ತಕಗಳನ್ನು ಹೊರ ತಂದಿದ್ದಾರೆ.
ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಆಶ್ರಮ ಸ್ಥಾಪನೆ ಆಯಿತು. ನಿಸ್ವಾರ್ಥ ಸೇವೆ,ಸರ್ವಜನರಿಗೂ ಆಶ್ರಯ ಕೊಡುತ್ತಾ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಧರ್ಮ ಜಾಗೃತಿಯ ಜೊತೆ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು.
ಕರ್ನಾಟಕವಲ್ಲದೆ ಮಹಾರಾಷ್ಟ್ರದ ಹೀಗೆ ಎಲ್ಲಕಡೆ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಪ್ರವಚನದ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಪ್ರಭಾವ ಬಿರುತ್ತಿತ್ತು. ಮುಂದೆ ಶ್ರೀಗಳು ಬಡ ಮಕ್ಕಳ ಸಲುವಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಸಹಸ್ರಾರು ಮಕ್ಕಳು ವಿದ್ಯಾವಂತರಾದರು.
ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದರು. ಅವರ ಪ್ರವಚನದುದ್ದಕ್ಕೂ ನೂರಾರು ಜನರು ಒಂದು ಶಬ್ದ ಮಾತನಾಡದೆ ಕೇಳುತ್ತಿದ್ದರು ಸೇರಿದ ಅಷ್ಟು ತುಂಬು ತನ್ಮಯತೆಯಿಂದ ಕುಳಿತಿರುತ್ತಿದ್ದರು.
ಇವರು ಯಾವುದೇ ಒಂದೇ ಜನಾಂಗಕ್ಕಾಗಲಿ ಅಥವಾ ಒಂದೇ ವಿಷಯಕ್ಕಾಗಲಿ ಸ್ಥಿಮಿತವಾಗಿರದೆ ಸಮಾಜದ ಎಲ್ಲ ಸ್ತರದ ಜನರ ಮನೋಭಾವಕ್ಕೆ ನಿಲುಕುವಂತೆ ನಿತ್ಯದ ಜೀವನದಲ್ಲಿ ಆಗಿಹೋಗುವ ಸಂಧರ್ಭಗಳನ್ನು ಉದಾಹರಣೆ ಕೊಡುತ್ತಾ ಧರ್ಮ ಚಿಂತನೆ ಹೇಳುತ್ತಿದ್ದರು. ಹಾಗೇ ಬೇರೆ ಯಾವ ಚಿಂತಕರು ಇದ್ದರು ಅವರ ಕಡೆಯಿಂದ ಪ್ರವಚನ ಹೇಳಿಸುತ್ತಿದ್ದರು. ಉದಾಹರಣೆಗೆ ಹೇಳಬೇಕಾದರೆ ಒಮ್ಮೆ ಹೊರ್ತಿಯಲ್ಲಿ ಅವರ ಪ್ರವಚನ ಏರ್ಪಡಿಸಿದಾಗ ವಿಜಯಪುರದ ಬ್ರಾಹ್ಮಣ ಸಮಾಜಕ್ಕೆ ಗುರುಗಳಾದ ಹಿರಿಯ ಪಂಡಿತರಾದ ಶ್ರೀಯುತ ಮದ್ವಾಚಾರ್ಯ ಮೊಕಾಶಿ ಅವರ ಕಡೆಯಿಂದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರ ಬಗ್ಗೆ ಪ್ರವಚನ ಹೇಳಿಸಿದ್ದರು. ಹೀಗೆ ಹಲವಾರು ಮಠದ ಸ್ವಾಮಿಗಳು, ಜ್ಞಾನಿಗಳು, ಸಂತರಿಂದ, ಶರಣರಿಂದ ಎಲ್ಲರ ಕಡೆಯಿಂದಲೂ ಪ್ರವಚನ ಹೇಳಿಸಿದ್ದಾರೆ.
ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ ಅದಕ್ಕೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು ಹೇಳುವೆ.
ಗೌರವದೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಹೇಳಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನಿರಾಕರಿಸಿದರು. ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಗೌರವದಿಂದ ಹಿಂದಿರುಗಿಸಿದ್ದಾರೆ.
ಅವರು ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಸಮಾಜಕ್ಕೆ)೯(pಮಾರ್ಗದರ್ಶಕರಾಗಿದ್ದರು.ನುಡಿದಂತೆ ನಡೆದವರು ನಮ್ಮ ವಿಜಯಪುರದ ಅಪ್ಪಾಜಿ ಶ್ರೀ ಸಿದ್ದೇಶ್ವರ ಸ್ವಾಮಿಗಳು.ಎಲ್ಲರನ್ನು ಸಮತ್ವದಿಂದ ಕಂಡು ಸಮಸ್ತ ಜನಾಂಗಕ್ಕೆ ಗುರುವಾಗಿ, ಸಂತರಾಗಿ, ವಿಶ್ವಮಾನವರಾಗಿ ಜನೆವರಿ ೨, ೨೦೨೩ ರಲ್ಲಿ ವಿಶ್ವದಲ್ಲಿ ಲೀನವಾದರು. ಬಯಲಲ್ಲಿ ಬಯಲಾದರು. ಮೊದಲೇ ತಮ್ಮ ಅಂತಿಮ ಸಂಸ್ಕಾರದ ಬಗ್ಗೆ ಉಯಿಲನ್ನು ಬರೆದಿಟ್ಟಿದ್ದರು. ಅವರ ಇಚ್ಛೆಯಂತೆ ಅವರ ಭೌತಿಕ ದೇಹಕ್ಕೆ ಅಗ್ನಿ ಸಂಸ್ಕಾರ ನೀಡಿ, ನಂತರ ಆ ಭಸ್ಮವನ್ನು ಗಂಗೆಯಲ್ಲಿ ವಿಸರ್ಜಿಸಬೇಕು ಹಾಗೇ ಯಾವುದೇ ಸ್ಮಾರಕ ಕಟ್ಟಬಾರದು ಎಂದು ಅವರ ಅಂತಿಮ ಇಚ್ಛೆಯಂತೆ ಎಲ್ಲ ಕಾರ್ಯಗಳನ್ನು ಅವರ ಶಿಷ್ಯವೃಂದ ಮತ್ತು ಭಕ್ತ ವೃಂದ ನಿರ್ವಹಿಸಿದರು. ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ.
ಇವರ ಇನ್ನೊಂದು ವಿಶೇಷವೆಂದರೆ ಧರಿಸುವ ಅಂಗಿಗೆ ಜೇಬು ಇರುತ್ತಿದ್ದಿಲ್ಲ. ಬರುವಾಗ ಏನು ತರಲಿಲ್ಲ ಹೋಗುವಾಗ ಏನು ಒಯುವುದಿಲ್ಲ ಅನ್ನುವದು ಇವರ ನಿಲವು ಆಗಿತ್ತು. ಇವರು ಶ್ವೇತ ವಸ್ತ್ರಧಾರಿ ಹಾಗೆಯೇ ಮನಸ್ಸು ಮತ್ತು ಮಾಡುವ ಕರ್ಮವು ಸಹ ನಿಷ್ಕಲ್ಮಶವಾಗಿತ್ತು. ನುಡಿದಂತೆ ನಡೆದಾಡಿದ ಕಣ್ಣಿಗೆ ಕಾಣುವ ದೇವರಾದರು. ಅವರು ಎಲ್ಲರ ಹೃದಯದಲ್ಲಿಯೂ ಚಿರಸ್ಥಾಯಿ ಆಗಿದ್ದಾರೆ.
ಈಗ ಬಿಜ್ಜರಿಗೆ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹುಟ್ಟಿದ ಮನೆಯಲ್ಲಿ ಅವರ ತಮ್ಮಂದಿರು ಮತ್ತು ಊರಿನ ಭಕ್ತರು ಸೇರಿ ಪ್ರತಿ ತಿಂಗಳು ಬರುವ ಹುಣ್ಣಿಮೆಯಂದು ಶಿವಾನುಭವ ಕಾರ್ಯಕ್ರಮ ನಡೆಸುತ್ತಾರೆ
Supar
ReplyDelete