ಲೇಖನ:- ಮಹಿಪತಿದಾಸರ‌ ಮುಂಡಿಗೆ "ಕಂಡೆ ನಾನೊಂದುಕೌತುಕ"......

.







ಲೇಖನ:-  ಮಹಿಪತಿದಾಸರ‌ ಮುಂಡಿಗೆ  "ಕಂಡೆ ನಾನೊಂದುಕೌತುಕ"...... 

ಕಾಖಂಡಕಿ ಶ್ರೀ ಮಹಿಪತಿರಾಯರು


ಕಂಡೆ ನಾನೊಂದು ಕೌತುಕವ
ಆಯಿ ಅಜ್ಜನ ನುಂಗಿದ ಕಂಡೆ

ನಾಯಿ ಲಜ್ಜೆಯ ಹಿಡಿದುದ ಕಂಡೆ
ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ
ಪ್ರದಕ್ಷಿಣೆ ಮಾಡುದು ಕಂಡೆ 1

ಇರುವೆ ವಿಷ್ಣುನ ನುಂಗಿದ ಕಂಡೆ
ನರಿಯು ರಾಜ್ಯನಾಳುದುಕಂಡೆ
ಅರಿಯು ಮರಿಯ ನುಂಗಿದ ಕಂಡೆ
ಕುರಿಯಿಂದ ಪರಲೋಕಯೆಯ್ದಿದು ಕಂಡೆ 2

ಇಲಿಯು ಯುಕ್ತಿಯದೋರುದು ಕಂಡೆ
ಹುಲಿಯು ಭಕ್ತಿಯು ಮಾಡುದು ಕಂಡೆ
ಇಳೆಯೊಳು ಮಹಿಪತಿ ಕಳೆವರದೊಳಿನ್ನು
ಮುಕ್ತಿ ಸಾಧನದೊಂದು ಬೆಡಗವು ಕಂಡೆ 3

_________/////_________/////_________

     
ಕಂಡೆ ನಾನೊಂದು ಕೌತುಕವ /ಪ

ಎಂಬತ್ತನಾಲ್ಕು ಲಕ್ಷ ಯೋನಿ ಜನ್ಮ ದಾಟಿ ಈ ಮಾನವ ಶರೀರ ಬಂದಿರುತ್ತದೆ. "ಮಾನವ ಜನ್ಮಂ ದುರ್ಲಬಂ" ಅಂತ ಗೊತ್ತಿದ್ದರೂ ತನ್ನ ಜೀವನಕ್ಕೆ ಬಹಳ ಕೌತುಕ ಪಡುತ್ತಾನೆ. ಅಂದರೆ ಎಲ್ಲವೂ ಭಗವದ್ ಇಚ್ಛೆಯಂತೆ ನಡೆದಿರುತ್ತದೆ ಅನ್ನುವುದು ಮರೆತು. ತಾನು ತನ್ನ ಮಕ್ಕಳು ಅಂತ ಸಂಸಾರ ಬಂಧನದಲ್ಲಿ ಕಂಸಾರಿಯನ್ನು‌ ಮರೆತು ತನ್ನ ಅಹಂಕಾರದಲ್ಲಿ ಮೆರೆಯುತ್ತಾನೆ.


ಆಯಿ ಅಜ್ಜನ ನುಂಗಿದ ಕಂಡೆ
ನಾಯಿ ಲಜ್ಜೆಯ ಹಿಡಿದುದ ಕಂಡೆ
ಕಾಯಿ ಹೆಜ್ಜೆಯನಿಕ್ಕುತ
ಜಗದೊಳು ರಾಜ್ಯಪ್ರದಕ್ಷಣೆ ಮಾಡುದು ಕಂಡೆ 1

"ಆಯಿ ಅಜ್ಜನ ನುಂಗಿದ ಕಂಡೆ"
   
ಮೊದಲನೇ ನುಡಿಯಲ್ಲಿ "ಆಯಿ"
ಅನ್ನುವ "ಸ್ತ್ರೀಲಿಂಗ", ಪದ ಇದನ್ನು
ಆಸೆಗೆ ಹೋಲಿಸಿದರೆ; "ಅಜ್ಜ" ಅನ್ನುವ ಪದಕ್ಕೆ "ಮನಸ್ಸನ್ನು" ಹೋಲಿಸಿದ್ದಾರೆ.  ಹೆಣ್ಣು, ಹೊನ್ನು,ಮಣ್ಣಿಗೆ ಬೆನ್ನು ಹತ್ತಿ ಹಾಳಾದವರ ಇತಿಹಾಸ ಬಹಳವಿದೆ. 

"ನಾಯಿ ಲಜ್ಜೆಯ ಹಿಡಿದುದ ಕಂಡೆ"

ಮನುಷ್ಯನ ಮನಸ್ಸು ಆಸೆಗೆ ಬೆನ್ನ ಹತ್ತಿದ್ದಾನೆ. ಅಸೆಯೆ ಅವನನ್ನು ನುಂಗಿಬಿಟ್ಟದೆ. ಅಂದರೆ ನಾಯಿಗಿಂತ ಕಡೆಯಾಗಿ ಆಸೆಯ ಹಿಂದೆ ಬಿದ್ದು ಕನಿಷ್ಠ  ಜೀವನ ನಮ್ಮದಾಗಿದೆ.

"ಕಾಯಿ ಹೆಜ್ಜೆಯನಿಕ್ಕುತ
ಜಗದೊಳು ರಾಜ್ಯಪ್ರದಕ್ಷಣೆ ಮಾಡುದು ಕಂಡೆ "


ಇಲ್ಲಿ  "ಕಾಯಿ" ಎಂದರೆ ದೇಹ. ಹುಟ್ಟಿದ  ಮೇಲಿಂದ
ಈ ಸಂಸಾರದಲ್ಲಿ  ಮನುಷ್ಯ ಆಸೆ  ಮತ್ತು ಗಳಿಕೆಯ ವ್ಯಾಮೋಹಕ್ಕೆ ಒಳಗಾಗಿ ;ಅದನ್ನು ಸಂಪಾದಿಸಲು ಊರುಕೇರೆ ದೇಶ  ಪ್ರದಕ್ಷಿಣೆ ಹಾಕುತ್ತಿದ್ದಾನೆ.

ಇರುವೆ ವಿಷ್ಣುನ ನುಂಗಿದ ಕಂಡೆ
ನರಿಯು ರಾಜ್ಯನಾಳುದ ಕಂಡೆ
ಕರಿಯು ಮರಿಯ ನುಂಗಿದ ಕಂಡೆ
ಕುರಿಯಿಂದ ಪರಲೋಕ ಆಯ್ದಿದು ಕಂಡೆ  /2


ಎರಡನೇ‌ ನುಡಿಯಲ್ಲಿ ಅಹಂಕಾರದ ಬಗ್ಗೆ ಹೇಳಿದ್ದಾರೆ. 

"ಇರುವೆ ವಿಷ್ಣುನ ನುಂಗಿದ ಕಂಡೆ "
ಮನುಷ್ಯ  ತನ್ನ ಮುಂದೆ ಯಾರು ಇಲ್ಲ. ನಾನೇ ಸರ್ವೇಶ್ವರ;  ಅತೀಯಾದ ಕಲಿಯುಗದ ಪಾಶ್ಚಿಮಾತ್ಯ ಅಂಧಾನುಕರಣೆಯಿಂದ  ಮೆರೆಯುತ್ತಾರೆ .

"ನರಿಯು ರಾಜ್ಯನಾಳುದ ಕಂಡೆ"

ನರಿ ಮೋಸ, ವಂಚನೆಯ ಪ್ರತಿಕ
ಹೀಗಾಗಿ ಮೋಸ, ವಂಚನೆ,ಲಂಚಗುಳಿ,, ಎಲ್ಲವು ತುಂಬಿ , "ಹಣವೇ ದೊಡ್ಡಪ್ಪ, ಸಂಭಂಧ ಯಾವ ಲೆಕ್ಕಪ್ಪ ಅಂತ ಆಗಿದೆ. 

"ಕರಿಯ ಮರಿಯ ನುಂಗುದು ಕಂಡೆ"

ಅಂದರೆ ಪ್ರಾಣಿಯಲ್ಲಿ  ಕೆಲವೊಂದು 
ಹುಟ್ಟಿದ ತನ್ನ ಮರಿಯನ್ನೆ ತಾನೇ ನುಂಗುತ್ತದೆ.ಹಾಗೇ
ಈ ಆಸೆ ನಮ್ಮನ್ನ ತನ್ನ ಬಲೆಯ ಸುಳಿಯೊಳಗೆ ಸಿಲುಕಿಸಿನಮಗೆ ತಿಯದ ಹಾಗೇ ನೋವು, ದುಃಖ ಕೊಡುತ್ತ ನುಂಗುತ್ತದೆ.ಆದರಿಂದ ನಮ್ಮ ಇಂದ್ರಯಗಳ‌ ಮೇಲೆ ನಿಗ್ರಹ‌ ಸಾಧಿಸಲು ಜಪತಪ ನೇಮವೃತಾದಿಗಳನ್ನು ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ.

"ಕುರಿಯಿಂದ‌ ಪರಲೋಕ ಆಯಿದು ಕಂಡೆ"

ಅಂದರೆ ಮನುಷ್ಯರು ತಮ್ಮ ಮನೋಕಾಮನೆಗಳು  ಈಡೇರಿದರೆ ಕುರಿಯ‌ನ್ನು ಬಲಿ ಕೊಡುತ್ತಾರೆ. ಹಾಗೇ ನಮ್ಮಲ್ಲಿರುವ ತಾಮಸಿಕ ಗುಣಗಳನ್ನು ನವವಿಧ ದ್ವೇಷ ಗಳನ್ನು ಬಲಿ ಕೊಟ್ಟರೆ , ಪರಲೋಕದ ಉತ್ತಮ ಗತಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.


ಇಲಿಯು ಯುಕ್ತಿಯ ದೋರುದು ಕಂಡೆ
ಹುಲಿಯು ಭಕ್ತಿಯು ಮಾಡುದು ಕಂಡೆ
ಇಳೆಯೊಳು ಮಹಿಪತಿ ಕಳೆವರದೊಳಿನ್ನು
ಮುಕ್ತಿ ಸಾಧನದ ಬೆಡಗವು ಕಂಡೆ /3


"ಇಲಿಯು ಯುಕ್ತಿಯ ದೋರುದು ಕಂಡೆ"

ಇಲ್ಲಿ ಗಣಪತಿ‌ವಾಹನ ಇಲಿ. ಇಲಿ ಯುಕ್ತಿಯ ಪ್ರತಿಕವಾಗಿದೆ. ಆದರೆ ಮನುಷ್ಯನಿಗೆ ಈ ಯುಕ್ತಿ ಇದ್ದರೂ ;ತನ್ನ ಸ್ವಾರ್ಥ ಅಥವಾ ಮನೆಹಾಳು
ಕೆಲಸಕ್ಕೆ ಬಳಸುತ್ತಿದ್ದಾನೆ. ಉದಾಹರಣೆಗೆ ಎಂದರೆ ಅಕೌಂಟ್ ಹ್ಯಾಕರ್ಸ್,ದೇಶದ್ರೋಹಿಗಳು,
ಢಕಾಯಿತರು, ಇವರೆಲ್ಲರೂ ಸುಶಿಕ್ಷಿತರೇ  ಆದರೂ ತಮ್ಮ ಜಾಣ್ಮೆಯನ್ನು ಲೋಕಕಂಟಕವಾಗಿ ಬಳಸುತ್ತಾರೆ.

ಇನ್ನು "ಹುಲಿಯ ಭಕ್ತಿಯಮಾಡುದು ಕಂಡೆ" 
ಅಂದರೆ ತೋರಿಕೆಯ ಭಕ್ತಿ , ಒಂದು‌ ಪಂಚತಂತ್ರ ಕಥೆಯಲ್ಲಿ ಬರುತ್ತದೆ. ಹುಲಿ ತೋರಿಕೆಯ ಭಕ್ತಿ ಮಾಡಲು ಎಲ್ಲ ಪ್ರಾಣಿಗಳೊಡಗೂಡಿ ಪೂಜೆ ಮಾಡುತ್ತದೆ , ಅಲ್ಲಿಯ ಭಕ್ಷ್ಯಗಳ‌ ಮೇಲೆ ಕಣ್ಣು ಹಾಕುತ್ತದೆ.ಎಲ್ಲ ಪ್ರಾಣಿಗಳು ಕಣ್ಮುಚ್ಚಿ ದೇವರನ್ನು ಸ್ಮರಿಸುತ್ತಿರಲು, ಹುಲಿ ನಿಧಾನಿಸಿ ದೇವರ ನೈವೇದ್ಯಕ್ಕೆ ಇಟ್ಟಿದ್ದ ಎಲ್ಲ ಭಕ್ಷ್ಯವನ್ನು ತಿನ್ನುತ್ತದೆ. ಹಾಗೇ ನಮ್ಮ ಭಕ್ತಿ ಕೂಡ,ಏನೋ ಪಡೆಯಲು ಅಥವಾ ತೋರಿಸಲು ತೋರಿಕೆಗೆ ಪೂಜೆ ಪುನಸ್ಕಾರ ಮಾಡುತ್ತೇವೆ.
ಸ್ವಕಾಮನೆಗೆ ಭಗವಂತನಲ್ಲಿ ಹರಕೆ
ಹೊತ್ತು ಸ್ವಾರ್ಥ ಗುಣ ಹೊಂದಿದ್ದೇವೆ.
ಅಥವಾ ನಾವುಗಳು  ತೋರಿಕೆಯ ಆಡಂಬರ ಪೂಜೆ ಮಾಡಿ ತೋರಿಸಿಕೊಳ್ಳುತ್ತೇವೆ.ಇಂತಹ ನಾಟಕೀಯ ಜನಗಳು ನಾವು.

"ಇಳೆಯೊಳು ಮಹಿಪತಿ ಕಳೆವರದೊಳಿನ್ನು ಮುಕ್ತಿ ಸಾಧನ"

ಅಂದರೆ ಈ ಭೂಮಿಯ ಮೇಲೆ ಮಾನವನಾಗಿ ಬಂದ ನಮ್ಮ‌ ಜೀವಪುಣ್ಯ. ಇಂತಹ ಜೀವನ ಉದ್ಧಾರವಾಗಲು ಲೌಕಿಕ ಜೀವನದ ಜೊತೆಯಲ್ಲಿ ಸಂಸ್ಕಾರವನ್ನು ಬೆರೆಸಿದಾಗ ಇಹಪರಗಳಲ್ಲಿ ಸುಖಶಾಂತಿ ಕಂಡು ಮೋಕ್ಷ ಪಡೆಯಬಹುದು.

🖋 ಪ್ರಿಯಾ‌ ಪ್ರಾಣೇಶ ಹರಿದಾಸ
         (ಕವಿಯತ್ರಿ, ಬರಹಗಾರ್ತಿ)

Comments

Post a Comment

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ